ಪ್ರಾತಿನಿಧಿಕ ಚಿತ್ರ 
ರಾಜ್ಯ

ಮಂಡ್ಯ: 1,844 ಅಕ್ರಮ ಇ-ಖಾತಾ ವಿತರಣೆ; ಮೂವರು ಪಿಡಿಒಗಳು ಸೇರಿ ನಾಲ್ವರು ಅಧಿಕಾರಿಗಳ ಅಮಾನತು

ವಿತರಣೆಯಾಗಿರುವ ಒಟ್ಟು 1,929 ಇ-ಖಾತಾಗಳ ಪೈಕಿ ಶೇ 4 ರಷ್ಟು ಅಂದರೆ ಕೇವಲ 85 ಇ-ಖಾತಾಗಳು ಮಾತ್ರ ಕಾನೂನುಬದ್ಧವಾಗಿದ್ದು, ಉಳಿದ ಶೇ 96 ರಷ್ಟು ಅಕ್ರಮವೆಂದು ಕಂಡುಬಂದಿದೆ.

ಬೆಂಗಳೂರು: ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ 1,844 ಇ-ಖಾತಾಗಳನ್ನು ನಿಯಮಬಾಹಿರವಾಗಿ ವಿತರಿಸಿದ್ದಕ್ಕೆ ಮೂವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒಗಳು) ಮತ್ತು ಎರಡನೇ ವಿಭಾಗದ ಸಹಾಯಕ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಮಂಡ್ಯ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಮಾನತುಗೊಳಿಸಿದ್ದಾರೆ.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ನೀಡಿದ ಆದೇಶದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ವಿತರಣೆಯಾಗಿರುವ ಒಟ್ಟು 1,929 ಇ-ಖಾತಾಗಳ ಪೈಕಿ ಶೇ 4 ರಷ್ಟು ಅಂದರೆ ಕೇವಲ 85 ಇ-ಖಾತಾಗಳು ಮಾತ್ರ ಕಾನೂನುಬದ್ಧವಾಗಿದ್ದು, ಉಳಿದ ಶೇ 96 ರಷ್ಟು ಅಕ್ರಮವೆಂದು ಕಂಡುಬಂದಿದೆ.

ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರ ಅಡಿಯಲ್ಲಿ ಸಿಇಒ ಇಂಡುವಾಳು ಗ್ರಾಮ ಪಂಚಾಯತಿಯ ಪಿಡಿಒಗಳನ್ನು ಅಮಾನತುಗೊಳಿಸಿದ್ದಾರೆ.

ಮೂವರು ಪಿಡಿಒಗಳಾದ ಎಎಸ್ ಸಿದ್ದರಾಜು, ದಯಾನಂದ ಮತ್ತು ಮರಿಲಿಂಗಯ್ಯ ಎಸ್, ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿದ್ದು, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ರಾಣಿ ಎಚ್ ಆರ್ ಎಂಬುವವರು ಅಮಾನತುಗೊಂಡಿದ್ದಾರೆ. ಇವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇದೆ.

2021 ರಿಂದ 2025ರವರೆಗೆ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಸೇರಿದ ಇಷ್ಟೊಂದು ಅಕ್ರಮ ಇ-ಖಾತಾಗಳನ್ನು ಹೇಗೆ ನೀಡಲಾಗಿದೆ ಎಂಬುದರ ವಿವರಗಳನ್ನು ಒದಗಿಸುವಂತೆ ನ್ಯಾಯಮೂರ್ತಿ ವೀರಪ್ಪ ಅವರು ಸಿಇಒಗೆ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸುವಂತೆಯೂ ಸೂಚಿಸಿದ್ದಾರೆ.

'ಸರ್ಕಾರದ ಅನುಮೋದನೆಯಿಲ್ಲದೆ ಸರ್ಕಾರಿ ಗೋಮಾಳಕ್ಕೆ ಸಂಬಂಧಿಸಿದಂತೆ ಎಷ್ಟು ಇ-ಖಾತಾಗಳನ್ನು ಮಾಡಲಾಗಿದೆ ಎಂಬುದರ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು ಮತ್ತು ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸಬೇಕು' ಎಂದು ಅವರು ಆದೇಶಿಸಿದರು.

'1844 ಅಕ್ರಮ ಇ-ಖಾತಾಗಳನ್ನು ಸೃಷ್ಟಿಸಿದವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಕೇವಲ ಅಮಾನತುಗೊಳಿಸಿದರೆ ಸಾಕಾಗುವುದಿಲ್ಲ. ಗಂಭೀರ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಮಂಡ್ಯ ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಇದನ್ನು ಮಂಡ್ಯಾ ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೆ ತರುವಂತೆ ಉಪ ಲೋಕಾಯುಕ್ತರು ತಮ್ಮ ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

'ಕಿರಂಗದೂರು ಗ್ರಾಮದ ಸರ್ವೆ ನಂ.26ರಲ್ಲಿ 17 ಕುಂಟೆ ಗೋಮಾಳ ಜಮೀನಿದೆ. ಯಾವುದೇ ಮಂಜೂರಾತಿ ಇಲ್ಲದೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ನಕ್ಷೆ ಅನುಮೋದನೆಯಾಗದಿರುವ ಸರ್ಕಾರಿ ಜಮೀನಿನಲ್ಲಿ ಒಟ್ಟು 12 ನಿವೇಶನಗಳನ್ನು ವಿಜಯ್‌ಕುಮಾರ್ ಬಿನ್ ಚೆನ್ನಪ್ಪ ಎಂಬುವವರ ಹೆಸರಿಗೆ ಖಾತೆ ಮಾಡಲಾಗಿದೆ. ನಂತರ ಒಂದೇ ತಿಂಗಳಲ್ಲಿ ಬೇರೆಯವರಿಗೆ ಖಾತೆ ವರ್ಗಾವಣೆ ಮಾಡಲಾಗಿದೆ" ಎಂದು ಆದೇಶದಲ್ಲಿ ತಿಳಿಸಿದೆ.

ಕಂದಾಯ ಭೂಮಿ ರಕ್ಷಿಸುವುದು ತಹಶೀಲ್ದಾರ್ ಹೊಣೆ. ಆದರೆ, ಕಿರಂಗದೂರು ಗ್ರಾಮದ ಸರ್ವೆ ಸಂಖ್ಯೆ 26 ರಲ್ಲಿರುವ ಗೋಮಾಳ ಭೂಮಿಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಶ್ರದ್ಧೆಯಿಂದ ವರ್ತಿಸಿಲ್ಲ ಎಂದು ಉಪ ಲೋಕಾಯುಕ್ತರು ಹೇಳಿದ್ದಾರೆ.

'ಮಂಡ್ಯ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಿಇಒ ಕೂಡ 12 ಅಕ್ರಮ ಖಾತಾಗಳ ರದ್ದತಿ ಬಗ್ಗೆ ವರದಿ ಮಾಡಿಲ್ಲ. ಪಂಚಾಯತ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಆ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿಕೊಂಡಿದ್ದಾರೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ರ ಸೆಕ್ಷನ್ 232 ರ ಅಡಿಯಲ್ಲಿ ಮಂಡ್ಯ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ನಿಷ್ಕ್ರಿಯತೆಯ ವಿರುದ್ಧ ಸಿಇಒ ಕ್ರಮ ಕೈಗೊಳ್ಳಬೇಕು' ಎಂದು ಉಪ ಲೋಕಾಯುಕ್ತರು ಹೇಳಿದರು.

'ಕಿರಂಗದೂರು ಗ್ರಾಮದ ಸರ್ವೆ ಸಂಖ್ಯೆ 26, 187 ಮತ್ತು 193 ಗೋಮಾಳ ಭೂಮಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವು ಫಲಾನುಭವಿಗಳಿಗೆ ನೀಡಿದ ಮೂಲ ಭೂ ಮಂಜೂರಾತಿಗಳ ಬಗ್ಗೆ ಮತ್ತು ಇಂಡುವಾಳ ಗ್ರಾಮ ಪಂಚಾಯಿತಿಯಿಂದ ನೀಡಲಾದ ನಕಲಿ ಇ-ಖಾತಾಗಳ ಬಗ್ಗೆ ತಹಶೀಲ್ದಾರ್ ವಿವರವಾದ ವರದಿ ಸಲ್ಲಿಸಿಲ್ಲ. ಆದ್ದರಿಂದ, ಮಂಡ್ಯ ಜಿಲ್ಲಾಧಿಕಾರಿ ಸಹಾಯಕ ಆಯುಕ್ತರ ಹುದ್ದೆಗಿಂತ ಕಡಿಮೆಯಿಲ್ಲದ ಅಧಿಕಾರಿಯಿಂದ ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು' ಎಂದು ಲೋಕ ಉಪಯುಕ್ತರು ಆದೇಶಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್; ಉದ್ಯಮಿ ಹೇಳಿದ್ದೇನು?

ಹಾರ್ಡ್‌ವೇರ್ ಗೋಡೌನ್ ನಲ್ಲಿ ಅಗ್ನಿದುರಂತ: ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೂ ಗಾಯ!

Shikhar Dhawanಗೆ ಬಿಗ್ ರಿಲೀಫ್: 5.7 ಕೋಟಿ ರೂ ಹಣ ಹಿಂದಿರುಗಿಸಿ.. ಮಾಜಿ ಪತ್ನಿಆಯೇಷಾ ಮುಖರ್ಜಿಗೆ ಕೋರ್ಟ್ ಸೂಚನೆ!

ಆರೋಗ್ಯ ಇಲಾಖೆಯಲ್ಲಿ ಅಕ್ರಮ, ಔಷಧಿ ಕೊರತೆ: ರಾಜ್ಯ ಸರ್ಕಾರಕ್ಕೆ ವಿಜಯೇಂದ್ರ ತರಾಟೆ

Ranji Trophy final: ಕರ್ನಾಟಕದ ಕೆ.ವಿ ಅನೀಶ್‌ಗೆ ಡಿಚ್ಚಿ ಹೊಡೆದ ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ, Video

SCROLL FOR NEXT