ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವ 65 ವರ್ಷದ ವೃದ್ಧನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ.
ಭಾನುವಾರ ಸಂಜೆ ಕೆಂಗೇರಿಯಲ್ಲಿ ಈ ಘಟನೆ ನಡೆದಿದ್ದು, 65 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಗರ ಪೊಲೀಸರು 41 ವರ್ಷದ ಉದ್ಯಮಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನವೀನ್ ಎಂದು ಗುರುತಿಸಲಾಗಿದೆ.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದು, ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿ ಘಟನೆ ನಡೆದಿದೆ.
ಆಗಿದ್ದೇನು?
ಹಾರ್ನ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನಂಜುಂಡಪ್ಪ (65) ಅವರ ಮೇಲೆ ನವೀನ್ ಎಂಬಾತ ಹಲ್ಲೆ ನಡೆಸಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿತ್ತು. ಹಲ್ಲೆಗೊಳಗಾದ ನಂಜುಂಡಪ್ಪ ಅವರು ನೀಡಿರುವ ದೂರಿನ ಆಧಾರದ ಮೇಲೆ ನವೀನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ಫೆಬ್ರುವರಿ 22ರಂದು ಸಂಜೆ 5.20ರ ಸುಮಾರಿಗೆ ನಾಗದೇವನಹಳ್ಳಿಯ ಆರ್.ಆರ್. ಲೇಔಟ್‌ನ ರಸ್ತೆಯಲ್ಲಿ ನಂಜುಂಡಪ್ಪ ಅವರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಕಾರಿನಲ್ಲಿ ಬಂದ ನವೀನ್ ಅವರು ಮನೆ ಮುಂದೆ ಕಾರು ನಿಲ್ಲಿಸಲು ಪದೇ ಪದೆ ಹಾರ್ನ್ ಮಾಡಿದ್ದ. ಕಾರು ಮುಂದೆ ಹೋಗಬಹುದೆಂದು ಭಾವಿಸಿದ್ದ ನಂಜುಂಡಪ್ಪ ಅವರು ‘ರಸ್ತೆಯಲ್ಲಿ ಸಾಕಷ್ಟು ಜಾಗವಿದೆ ಅಲ್ಲವೇ? ಮುಂದಕ್ಕೆ ಹೋಗಿ’ ಎಂದು ನವೀನ್‌ಗೆ ಹೇಳಿದ್ದರು.
ಆಗ ಕಾರಿನಿಂದ ಇಳಿದ ಆರೋಪಿ, ನಂಜುಂಡಪ್ಪ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ತಕ್ಷಣ ನವೀನ್‌ನ ತಾಯಿ ಬಂದು ಮಗನನ್ನು ಸಮಾಧಾನಪಡಿಸಲು ಯತ್ನಿಸಿದ್ದರು. ಆದರೂ ಸಮಾಧಾನವಾಗದ ನವೀನ್ ಅವರು ನಂಜುಂಡಪ್ಪ ಅವರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದ. ಬಳಿಕ ಸ್ಥಳಕ್ಕೆ ಬಂದ ಸ್ಥಳೀಯರು, ಜಗಳ ಬಿಡಿಸಿ ಕಳುಹಿಸಿದ್ದರು’ ಎಂದು ಸೈಬರ್ ಪೊಲೀಸರು ಹೇಳಿದರು.
ನವೀನ್ ವಿರುದ್ಧ ರೌಡಿಶೀಟ್?
ಮಾಧ್ಯಮಗಳ ವರದಿ ಪ್ರಕಾರ ಆರೋಪಿ ನವೀನ್ ನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ರೌಡಿಶೀಟ್ ತೆರೆಯಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆರೋಪಿ ನವೀನ್ ವಿರುದ್ಧ ಇದು ಮೊದಲನೇ ಪ್ರಕರಣವಲ್ಲ. ಈ ಹಿಂದೆ ಸಾಕಷ್ಟು ಪ್ರಕರಣಗಳಲ್ಲಿ ನವೀನ್ ಹೆಸರು ಕೇಳಿಬಂದಿತ್ತು.
ಪ್ರಮುಖವಾಗಿ 2024ರಲ್ಲಿ ಜ್ಞಾನಭಾರತಿಯಲ್ಲಿ ವರದಿಯಾದ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ದಾಖಲೆಗಳು ತೋರಿಸುತ್ತವೆ ಮತ್ತು ಈ ವಿಷಯವು ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಹೀಗಾಗಿ ಪದೇ ಪದೇ ಕಾನೂನು ಉಲ್ಲಂಘಿಸುತ್ತಿರುವ ನವೀನ್ ವಿರುದ್ಧ ರೌಡಿಶೀಟ್ ತೆರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.