ಬಾಗೇಪಲ್ಲಿಯ ಶಾಸಕನಾಗಿ ಎನ್.ಎಸ್ ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ. ಎದುರಾಳಿ, ಚುನಾವಣಾ ಆಯೋಗ ಮತ್ತು ಸಂಬಂಧಪಟ್ಟ ವ್ಯಕ್ತಿಗಳಿಗೆ ಅಫಿಡವಿಟ್, ಕೌಂಟರ್ ಅಫಿಡವಿಟ್ ಸಲ್ಲಿಸಲು ಸುಪ್ರೀಂ ಕೋರ್ಟ್ 6 ವಾರಗಳ ಕಾಲಾವಕಾಶ ನೀಡಿದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಕಾಂಗ್ರೆಸ್‌ನ ಎಸ್.ಎನ್. ಸುಬ್ಬಾರೆಡ್ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಬ್ಬಾ ರೆಡ್ಡಿ ಮೇಲ್ಮನವಿಯ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಪೀಠ ನಡೆಸಿದ್ದು, ಸೆಪ್ಟೆಂಬರ್ 7ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲುವಾಸದಲ್ಲಿದ್ದ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಎರಡು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಸದ್ಯ ಕುಲಕರ್ಣಿಗೆ ರಿಲೀಫ್ ಸಿಕ್ಕಿದೆ. ಇತ್ತೀಚಿಗೆ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾ ಆಗಿತ್ತು. ಬಳಿಕ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಕಾಂಗ್ರೆಸ್‌ನ 35 ಕ್ಕೂ ಹೆಚ್ಚು ಶಾಸಕರು ನಿನ್ನೆ ರಾತ್ರಿ ಔತಣಕೂಟ ನಡೆಸಿ ನಾಯಕತ್ವ ಗೊಂದಲಗಳನ್ನು ಬಗೆಹರಿಸುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇಡಲು ಮುಂದಾಗಿದ್ದಾರೆ. ನಾಯಕತ್ವ ಗೊಂದಲಗಳು ರಾಜ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ. ಜನರಿಗೂ ತಪ್ಪು ಸಂದೇಶ ರವಾನೆಯಾಗುತ್ತಿದ್ದು, ಪಕ್ಷದ ಹಿತದೃಷ್ಟಿಯಿಂದ ನಾಯಕತ್ವ ಗೊಂದಲಗಳಿಗೆ ತೆರೆ ಎಳೆಯಿರಿ ಎಂದು ಶಾಸಕ ಬಾಲಕೃಷ್ಣ ಅವರ ಹುಟ್ಟುಹಬ್ಬದ ಔತಣಕೂಟದಲ್ಲಿ ಭಾಗಿಯಾಗಿದ್ದ ಶಾಸಕರು ಹೈಕಮಾಂಡ್‌ಗೆ ಮನವಿ ಮಾಡಲು ತೀರ್ಮಾನ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಬಜೆಟ್ ಮಂಡನೆ ನಂತರ ದೆಹಲಿಗೆ ತೆರಳಿ ಹೈಕಮಾಂಡ್ ಮುಂದೆ ತಮ್ಮ ಬೇಡಿಕೆ ಸಲ್ಲಿಸಲು ಈ ಶಾಸಕರು ತೀರ್ಮಾನ ಕೈಗೊಂಡಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಆಗ್ರಹಿಸಿ ಇತ್ತೀಚಿಗೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಭಾರಿ ಪ್ರತಿಭಟನೆಗೆ ಮಣಿದ ಸಿದ್ದರಾಮಯ್ಯ ಸರ್ಕಾರ ನೇಮಕಾತಿ ಸಂಬಂಧ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56 ಸಾವಿರ ಹುದ್ದೆ ಭರ್ತಿಗೆ ಒಪ್ಪಿಗೆ ಸೂಚಿಸಲಾಗಿದೆ. ಸಂಪುಟ ಸಭೆಯಲ್ಲಿ ನೇಮಕಾತಿಗೆ ಇರುವ ಸಾಧಕ ಭಾಧಕಗಳ ಬಗ್ಗೆ ಚರ್ಚಿಸಿದ್ದು, ಅಂತಿಮವಾಗಿ ಮೀಸಲಾತಿ ಮಿತಿ ಶೇ.50 ಮೀರದಂತೆ ಒಳಮೀಸಲಾತಿಯೊಂದಿಗೆ ನೇಮಕಾತಿ ನಡೆಸಲು ತೀರ್ಮಾನಿಸಿದೆ.
ದಲಿತ ಸಮುದಾಯದ ಸಚಿವರೊಂದಿಗಿನ ಭೇಟಿ ಮಾಡಿದ ಬೆನ್ನಲೇ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಪರಿಶಿಷ್ಟ ಜಾತಿಗಳ (ಒಳ ಮೀಸಲಾತಿ) ವಿಧೇಯಕ 2025ಕ್ಕೆ ಸಹಿ ಹಾಕಿದ್ದಾರೆ. ಒಳ ಮೀಸಲಾತಿ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದರಿಂದ ರಾಜ್ಯಪಾಲರು ಈ ಮಸೂದೆಗೆ ಸಹಿ ಹಾಕಿರಲಿಲ್ಲ. ಆದರೆ ದಲಿತ ಸಚಿವರ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಒಳ ಮೀಸಲಾತಿ ಮಸೂದೆಗೆ ಅಂಕಿತ ಹಾಕುವಂತೆ ಮನವಿ ಮಾಡಿತ್ತು. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಪ್ರಸ್ತಾಪಿಸಿ, ಒಳ ಮೀಸಲಾತಿ ಗೊಂದಲದಿಂದ ನೇಮಕಾತಿ ವಿಳಂಬವಾಗುತ್ತಿದೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ವೇಳೆ ಅಂಕಿತ ಹಾಕುವುದಾಗಿ ಸಚಿವರ ನಿಯೋಗಕ್ಕೆ ರಾಜ್ಯಪಾಲರು ಭರವಸೆ ನೀಡಿದ್ದರು
ಸಿರಿವಂತರು ಗ್ಯಾರೆಂಟಿ ಯೋಜನೆಗಳನ್ನು ಬಿಟ್ಟುಕೊಡಬೇಕೆಂಬ ಅಭಿಪ್ರಾಯವನ್ನು ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಸಿರಿವಂತರು ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಕೊಡುವುದರಲ್ಲಿ ತಪ್ಪೇನಿದೆ. ಸರ್ಕಾರಿ ನೌಕರರು, ದೊಡ್ಡ, ದೊಡ್ಡ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ ಇರುವವರು - ಹೀಗೆ ಬಹಳ ಜನ ನಮಗೆ ಗ್ಯಾರಂಟಿ ಯೋಜನೆಗಳು ಬೇಡ ಎಂದಿದ್ದಾರೆ" ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ. ಆದರೂ, ಜನರ ಹಿತದೃಷ್ಟಿಯಿಂದ ಸರ್ಕಾರ ಯೋಜನೆಯನ್ನು ಮುಂದುವರೆಸಿದೆ ಎಂದು ಹೇಳಿದ್ದಾರೆ. ಸಂಕಷ್ಟದ ಸಮಯದಲ್ಲಿರುವ ಕುಟುಂಬಗಳಿಗೆ ಆರ್ಥಿಕ ಭದ್ರತೆ ಸಿಗಲೆಂಬ ಉದ್ದೇಶದಿಂದಲೇ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇವು ಕೇವಲ ಹಣಕಾಸು ನೆರವು ಅಲ್ಲ; ಜನರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ತುಂಬುವ ಕ್ರಮವಾಗಿದೆ ಎಂದು ತಿಳಿಸಿದರು.