ಬೆಂಗಳೂರು: ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ದಿನದಂದು ಕಂಠಪೂರ್ತಿ ಮದ್ಯ ಸೇವಿಸಿದ್ದ ಚಾಲಕನೊಬ್ಬ ಪಾದಚಾರಿಗಳ ಮೇಲೆ ಕಾರು ಹತ್ತಿಸಿದ್ದು, ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಬ್ಬಾಳದ ಮಾಲ್ ಆಫ್ ಏಷ್ಯಾ ಬಳಿ ಬುಧವಾರಿ ನಡೆದಿದೆ.
ಬುಧವಾರ ರಾತ್ರಿ ಸುಮಾರು 10.20ರ ಸಮಯದಲ್ಲಿ ಮಾಲ್‌ನ ಹಿಂಬದಿ ಗೇಟ್ ನಂ. 3 ಬಳಿ ಅಪಘಾತ ಸಂಭವಿಸಿದೆ.
ಆರೋಪಿಯನ್ನು ದೊಡ್ಡ ಬೊಮ್ಮಸಂದ್ರ ನಿವಾಸಿ ಸುನಿಲ್ ಕುಮಾರ್ ಸಿಂಗ್ ಬಿ (48) ಎಂದು ಗುರ್ತಿಸಲಾಗಿದೆ. ಈತ ವೃತ್ತಿಯಲ್ಲಿ ವಕೀಲನಾಗಿದ್ದು, ಮಹೀಂದ್ರ XUV 700 (KA-05-NP-3609) ಕಾರನ್ನು ಚಲಾಯಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮದ್ಯದ ಅಮಲಿನಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಓಡಿಸುತ್ತಿದ್ದ ಸಿಂಗ್ ನಿಯಂತ್ರಣ ಕಳೆದುಕೊಂಡು ಮೊದಲು ಪಾದಚಾರಿಗಳ ದಾರಿಯಲ್ಲಿ ಅಳವಡಿಸಿದ್ದ ಕಬ್ಬಿಣದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿದ್ದ ಜನರ ಮೇಲೆ ವಾಹನ ನುಗ್ಗಿದೆ.
ಅಪಘಾತದಲ್ಲಿ ಅಕ್ಕಮ್ಮ (30), ಚಂದ್ರಶೇಖರ್ (36), ರಾಜಲಕ್ಷ್ಮಿ (53) ಮತ್ತು ಪ್ರಜ್ವಲ್ ಶಶಿಧರ ಚವಾಡಿ (27) ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ 281 (ಅಜಾಗರೂಕ ಚಾಲನೆ) ಮತ್ತು 125(ಎ) (ಜೀವಕ್ಕೆ ಅಪಾಯ ಉಂಟುಮಾಡುವ ಕೃತ್ಯದಿಂದ ಗಾಯ) ವಿಧಿಗಳ ಜೊತೆಗೆ, ಮದ್ಯದ ಅಮಲಿನಲ್ಲಿ ವಾಹನ ಚಾಲನೆಗೆ ಸಂಬಂಧಿಸಿದ ಮೋಟಾರ್ ವಾಹನ ಕಾಯ್ದೆಯ 185ನೇ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏತನ್ಮಧ್ಯೆ ಘಟನಾ ಸ್ಥಳದಲ್ಲಿ ಸಮರ್ಪಕ ಭದ್ರತಾ ಕ್ರಮಗಳನ್ನು ಕೈಗೊಂಡಿರದ ಕಾರಣಕ್ಕೆ ಮಾಲ್‌ನ ಭದ್ರತಾ ಇನ್‌ಚಾರ್ಜ್ ವಿರುದ್ಧವೂ ಪ್ರಕರಣ ದಾಖಲಾಗಿದೆ.