ಬಳ್ಳಾರಿ: ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಬಳಿ ನಡೆದ ಬ್ಯಾನರ್ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಎಂಬುವವರು ಗುಂಡೇಟಿಗೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಗಳ ಸೂಚನೆಯಂತೆ ವಾಲ್ಮೀಕಿ ಪುತ್ಥಳಿ ಅನಾವರಣ ತಾತ್ಕಾಲಿಕ ಮುಂದೂಡಲಾಗಿದೆ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇದಕ್ಕಿಂತ ವಿಜೃಂಭಣೆಯಿಂದ ಪುತ್ಥಳಿ ಅನಾವರಣ ಮಾಡಲಾಗುವುದು. ಆ ಸಮಾರಂಭಕ್ಕೆ ಎಲ್ಲರೂ ಆಗಮಿಸಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ವಾಲ್ಮೀಕಿ ಪರವಾಗಿದೆ. 15 ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ರಲ್ಲಿ ವಿಜಯಿಯಾಗಿದೆ. ಭರತ್ ರೆಡ್ಡಿ ಮಾಡಿರುವ ಕೆಲಸ ಸಹಿಸದೇ ಬಿಜೆಪಿಯವರು ಬ್ಯಾನರ್ ವಿಚಾರದಲ್ಲಿ ಘರ್ಷಣೆ ಪ್ರಚೋದಿಸಿ, ಕಾಂಗ್ರೆಸ್ ಪಕ್ಷಕ್ಜೆ ಕಪ್ಪು ಚುಕ್ಜೆ ತರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಗುಂಡು ಹಾರಿಸಿದ ಪ್ರಕರಣದಲ್ಲಿ ಸರ್ಕಾರ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಕೆಲಸ ಮಾಡಲಿದೆ. ಮನೆ ಸೇರಿದರೂ ಮತ್ತೆ ಕಾಲು ಕೆರೆದು ಜಗಳಕ್ಕೆ ಬಂದಿದ್ದಾರೆ. ಇದು ಅವಮಾನದ ವಿಷಯವಾಗಿದೆ ಎಂದು ಹೇಳಿದರು.
ಜನಾರ್ಧನರೆಡ್ಡಿ ಅವರು ಸೂರ್ಯನಾರಾಯಣ ರೆಡ್ಡಿ ಅವರ ಬಗ್ಗೆ ಮಾತನಾಡುವುದು ಶೋಭೆ ತರುವ ವಿಷಯ ಅಲ್ಲ. ತಮ್ಮ ಮನೆ ಮುಂದೆ ಬ್ಯಾನರ್ ಹಾಕಲು ಬಿಡದಿರುವುದು ಪ್ರಶ್ನೆಯಾಗಿದೆ. ರಿಪಬ್ಲಿಕ್ ಬಳ್ಳಾರಿ ಮಾಡಲು ಬಿಡಲ್ಲ. ಶಾಂತಿ ಕದಡುವ ಕೆಲಸಕ್ಕೆ ಅವಕಾಶ ನೀಡಲ್ಲ, ಅವರ ದಬ್ಬಾಳಿಕೆಗೆ ಬಗ್ಗಲ್ಲ. ಅವರು ತಮ್ಮ ಮನೆಯ ಮೇಲೆ ಕಲ್ಲು, ಕಾರಪುಡಿ ಇಟ್ಟುಕೊಂಡು ದಾಳಿ ಮಾಡಿದ್ದಾರೆ. ವಾಲ್ಮೀಕಿ ಜನ ಕಾಂಗ್ರೆಸ್ ಪಕ್ಷದ ಪರ ಇದ್ದಾರೆ ಎಂಬುದನ್ನು ಸಹಿಸದೆ ಬಿಜೆಪಿ ಈ ಗಲಾಟೆ ಮಾಡಿಸಿದೆ ಎಂದು ಟೀಕಿಸಿದರು.
ಶಾಸಕ ಗಣೇಶ್ ಮಾತನಾಡಿ, ಬಿಜೆಪಿಯವರು ಏನೇನೂ ತನಿಖೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಕಾಲದಲ್ಲಿನ ಹತ್ಯೆಗಳ ಬಗ್ಗೆ ತನಿಖೆ ಆದರೆ ಅವರು ಎಲ್ಲಿ ಇರಬೇಕೋ ಅಲ್ಲಿ ಇರಬೇಕಾಗುತ್ತದೆ. ಮನೆಯಲ್ಲೇ ಮೂರು ಜನ ಸಚಿವರಿದ್ದರೂ ಮಾಡಿದ್ದೇನು ಎಂದು ಪ್ರಶ್ನಿಸಿದರು.