ಹುಬ್ಬಳ್ಳಿ: ಯಲ್ಲಾಪುರದಲ್ಲಿ ನಡೆದ ರಂಜಿತಾ ಹತ್ಯೆ ಸಾಕಷ್ಟು ದೊಡ್ಡ ವಿವಾದ ಸೃಷ್ಟಿ ಮಾಡಿದ್ದು ಹತ್ಯೆ ಮಾಡಿದ ರಫಿಕ್ ನನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ರಂಜಿತಾ ಬನಸೋಡೆ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಹಿಂದೂಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ.
ಘಟನೆ ನಡೆದ ಬೆನ್ನಲ್ಲೇ ಅಲರ್ಟ್ ಆಗಿರುವ ಶಾಸಕರು, ಈಗಾಗಲೇ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. ಘಟನೆಯ ಸಂಪೂರ್ಣ ಮಾಹಿತಿಯನ್ನು ಪಡೆದಿರುವ ಅವರು, ತನಿಖೆಯನ್ನು ಚುರುಕುಗೊಳಿಸುವಂತೆ ಮತ್ತು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಂಜಿತಾ ಕೊಲೆ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಂದೂ ಮಹಿಳೆಯ ಹತ್ಯೆ ಖಂಡಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಭಾನುವಾರ ಯಲ್ಲಾಪುರ ಬಂದ್ಗೆ ಕರೆ ನೀಡಿದ್ದಾರೆ. ಜೊತೆಗೆ ಆರೋಪಿ ರಫೀಕ್ನನ್ನ ಆದಷ್ಟು ಬೇಗ ಬಂಧಿಸಿ ಆತನಿಗೆ ತಕ್ಕ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸ್ ಠಾಣೆಗೆ ಮುತ್ತಿಗೆ
ಹಿಂದೂ ಪರ ಸಂಘಟನೆಗಳು ಖಂಡಿಸಿ ಯಲ್ಲಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ರಫೀಕ್ನನ್ನ ಆದಷ್ಟು ಬೇಗ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು, ಉತ್ತರ ಕನ್ನಡ ಎಸ್ಪಿ ದೀಪಕ್ ಸ್ಥಳಕ್ಕೆ ಆಗಮಿಸಿದ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮುತಾಲಿಕ್ ಆಕ್ರೋಶ
ಈ ಘಟನೆ ಸಂಬಂಧ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಲ್ಲಾಪುರದಲ್ಲಿ ಹಿಂದೂ ಯುವತಿಯ ಕೊಲೆಯಾಗಿದೆ. ಅನೈತಿಕ ಸಂಬಂಧ ಮೂಲಕ ರಫೀಕ್ ಎಂಬಾತ ಕೊಲೆ ಮಾಡಿದ್ದಾನೆ, ಇನ್ನೂವರಗೆ ಕೊಲೆಗಾರನ ಬಂಧನವಾಗಿಲ್ಲಾ? ಆತನ ಮನೆಯವರನ್ನು ಬಂಧಿಸಿ ತನಿಖೆ ಮಾಡಬೇಕು, ಆಗ ಆರೋಪಿ ಬಗ್ಗೆ ಗೊತ್ತಾಗುತ್ತದೆ.
ಮೃತ ರಂಜಿತಾಗೆ ನಾನು ಶ್ರದ್ದಾಂಜಲಿ ಸಲ್ಲಿಸುತ್ತೇನೆ, ಆತನ ಬಂಧನವಾಗೋವರಗೆ ಶವ ಸಂಸ್ಕಾರ ಮಾಡಬಾರದು, ಆರೋಪಿಯನ್ನು ಒದ್ದು ಒಳಗೆ ಹಾಕಬೇಕು ಎಂದು ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶಾಸಕ ಶಿವರಾಮ್ ಹೆಬ್ಬಾರ್ ಕೆಂಡಾಮಂಡಲ
ಯಲ್ಲಾಪುರದಲ್ಲಿ ನಡೆದ ರಂಜಿತಾ ಬನಸೋಡೆ ಅವರ ಭೀಕರ ಕೊಲೆಯನ್ನು ಶಾಸಕ ಶಿವರಾಮ ಹೆಬ್ಬಾರ್ ತೀವ್ರವಾಗಿ ಖಂಡಿಸಿದ್ದು, ಇದೊಂದು ಅಮಾನವೀಯ ಕೃತ್ಯವೆಂದು ಬಣ್ಣಿಸಿದ ಅವರು, ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ಆರೋಪಿಯನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಶ್ರೀರಾಮಸೇನೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಇಂದು ಯಲ್ಲಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಲ್ಲದೇ ಸ್ಥಳಕ್ಕೆ ಬಂದ ಎಸ್.ಪಿ ರವರನ್ನು ತರಾಟೆ ತೆಗೆದುಕೊಂಡರು.
ಯಲ್ಲಾಪುರದ ಕಾಳಮ್ಮ ನಗರದ ನಿವಾಸಿ ರಂಜಿತಾ ಬನಸೋಡೆ ಅವರ ಕೊಲೆಯ ಬಗ್ಗೆ ಪ್ರತಿಕ್ರಿಯಿಸಿದ ಶಿವರಾಮ ಹೆಬ್ಬಾರ್, 'ಒಬ್ಬ ಅಮಾಯಕ ಹೆಣ್ಣುಮಗಳ ಭೀಕರ ಹತ್ಯೆ ನಡೆದಿರುವುದು ಅತ್ಯಂತ ಖಂಡನೀಯ. ಇದು ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಕೃತ್ಯವಾಗಿದೆ. ಯಲ್ಲಾಪುರದ ಇತಿಹಾಸದಲ್ಲೇ ಇಂತಹ ಕ್ರೂರ ಘಟನೆಯನ್ನು ನಾವೆಂದು ಕಂಡಿರಲಿಲ್ಲ. ಇಂತಹ ಕೃತ್ಯಗಳು ಶಾಂತಿಪ್ರಿಯ ಯಲ್ಲಾಪುರಕ್ಕೆ ಕಪ್ಪುಚುಕ್ಕೆಯಾಗಿದೆ' ಎಂದು ವಿಷಾದ ವ್ಯಕ್ತಪಡಿಸಿದರು.
ಲವರ್ ಕೈಕೊಟ್ಟಿದ್ದರಿಂದ ನನ್ನ ತಂಗಿಗೆ ಗಂಟು ಬಿದ್ದಿದ್ದ ರಫೀಕ್
ವಿವಾಹಿತೆ ಮಹಿಳೆ ರಂಜಿತಾಳನ್ನ ರಫೀಕ್ ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹಾಡಹಗಲೇ ರಂಜಿತಾ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇನ್ನು ಈ ಘಟನೆ ಬಗ್ಗೆ ಮೃತ ರಂಜಿತಾ ಸಹೋದರ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಜಾನುವಾರು ರೀತಿಯಲ್ಲಿ ಕತ್ತು ಕೊಯ್ದಿದ್ದಾನೆ, ಹಾಡಹಗಲೇ ಕೃತ್ಯ ನಡೆಸಿದ್ದಾನೆ, ನನ್ನ ಕೈಯಲ್ಲಿಯೇ ತಂಗಿ ಜೀವ ಬಿಟ್ಟಿದ್ದಾಳೆ.
ಹಣಕಾಸಿನ ವಿಚಾರದ ಹಿನ್ನೆಲೆಯಲ್ಲಿ ಆರೋಪಿ ರಫೀಕ್ ಮತ್ತು ರಂಜಿತಾಳ ಪರಿಚಯವಾಗಿತ್ತು, ರಫೀಕ್ಗೆ ಲವರ್ ಕೈಕೊಟ್ಟಿದ್ದರಿಂದ ನನ್ನ ತಂಗಿಗೆ ಗಂಟು ಬಿದ್ದಿದ್ದ, ಈಗ ಕೊಲೆ ಮಾಡಿದ್ದಾನೆ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮೃತ ರಂಜಿತಾಳ ಸಹೋದರ ವೀರಭದ್ರ ಆಗ್ರಹಿಸಿದ್ದಾರೆ.