ತುಮಕೂರು: ಕಳೆದ ಎರಡು ದಿನಗಳಲ್ಲಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಎರಡು ಲಂಗೂರ್‌ಗಳು ಸೇರಿದಂತೆ 11 ಮಂಗಗಳು ಸಾವಿಗೀಡಾಗಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ತುಮಕೂರು ತಾಲ್ಲೂಕಿನ ದೇವರಾಯನದುರ್ಗ-ದುರ್ಗದಹಳ್ಳಿ ಅರಣ್ಯ ಪ್ರದೇಶದಲ್ಲಿ 200 ರಿಂದ 500 ಮೀಟರ್ ವ್ಯಾಪ್ತಿಯಲ್ಲಿ ಒಂಬತ್ತು ಮಂಗಗಳು ಮತ್ತು ಎರಡು ಲಂಗೂರ್‌ಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು.
ಶುಕ್ರವಾರ ಸಂಜೆ ಈ ವಿಷಯ ಬೆಳಕಿಗೆ ಬಂದ ನಂತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಶನಿವಾರ ಬೆಳಿಗ್ಗೆ ಮತ್ತೆ ಹೆಚ್ಚಿನ ಮಂಗಗಳು ಸತ್ತಿರುವುದು ಕಂಡುಬಂದಿದೆ.
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಾಥಮಿಕವಾಗಿ ಪ್ರಾಣಿಗಳ ಅನ್ನನಾಳ ಮತ್ತು ಕರುಳಿನಲ್ಲಿ ಅಕ್ಕಿ ಕಂಡುಬಂದಿದ್ದು, ವಿಷಾಹಾರ ಸೇವನೆಯಿಂದ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಣಿಗಳ ಬಾಯಿ ಮತ್ತು ಕುತ್ತಿಗೆಯ ಸುತ್ತಲಿನ ಭಾಗವು ನೀಲಿ ಬಣ್ಣಕ್ಕೆ ತಿರುಗಿದ್ದು, ವಿಷವಿಕ್ಕಿರುವ ಸಾಧ್ಯತೆ ಬಗ್ಗೆಯೂ ಶಂಕೆ ವ್ಯಕ್ತವಾಗಿದ್ದು, ಬಹುಶಃ ಅವು ಹಾಳಾದ ಅಥವಾ ಕೊಳೆತ ಉಳಿದ ಆಹಾರವನ್ನು ತಿಂದಿರಬಹುದು ಎಂದು ಹೇಳಿದ್ದಾರೆ.
ಆದಾಗ್ಯೂ, ರೋಗದ ಯಾವುದೇ ಲಕ್ಷಣಗಳನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ ಮತ್ತು ಪ್ರಯೋಗಾಲಯ ವಿಶ್ಲೇಷಣೆಯ ನಂತರವೇ ಸಾವಿಗೆ ನಿಖರವಾದ ಕಾರಣವನ್ನು ದೃಢಪಡಿಸಲಾಗುವುದು ಎಂದು ಹೇಳಿದರು.
ಸದ್ಯ ಒಳಾಂಗಗಳ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ವಿವರವಾದ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಶೀಘ್ರದಲ್ಲೇ ವರದಿಗಳನ್ನು ನಿರೀಕ್ಷಿಸಲಾಗಿದೆ. ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಯಾವುದೇ ಘಟನೆ ಮರುಕಳಿಸುವುದನ್ನು ತಡೆಗಟ್ಟಲು ಈ ಪ್ರದೇಶದಲ್ಲಿ ಕಣ್ಗಾವಲು ತೀವ್ರಗೊಳಿಸಲಾಗಿದೆ.