ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಳವಾರ, ಜನವರಿ 6 ರಂದು ವಿಶಿಷ್ಠ ದಾಖಲೆ ಬರೆಯಲು ಸಿದ್ಧರಾಗಿದ್ದಾರೆ.
ಅತಿ ಹೆಚ್ಚು ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿರುವ ದೇವರಾಜ ಅರಸು ಅವರ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಅವರು ನಾಳೆ ಸರಿಗಟ್ಟಲಿದ್ದು, ಈ ಮೂಲಕ 7 ವರ್ಷ 239 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಲಿದ್ದಾರೆ.
ಸಿದ್ದರಾಮಯ್ಯ ಅವರು 2013-2018ರ ಅವಧಿಯಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ದಾಗ 1,829 ದಿನಗಳ ಕಾಲ ಅಧಿಕಾರದಲ್ಲಿದ್ದರು. ಈಗ ಎರಡನೇ ಅವಧಿಗೆ ಆಡಳಿತದ ಸೂತ್ರ ಹಿಡಿದಿರುವ ಅವರು, ಜನವರಿ 6ರಂದು ದೇವರಾಜ ಅರಸರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ದೇವರಾಜ ಅರಸು ಅವರು ಸತತವಾಗಿ ಏಳೂವರೆ ವರ್ಷ ಅಧಿಕಾರದಲ್ಲಿದ್ದರೆ ಸಿದ್ದರಾಮಯ್ಯ ಮೊದಲ ಅವಧಿ ಪೂರ್ಣಗೊಂಡ ಬಳಿಕ ಮತ್ತೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲ. 2018ರ ವಿಧಾನ ಸಭೆ ಚುನಾವಣೆ ಫಲಿತಾಂಶ ಅತಂತ್ರವಾಗಿದ್ದ ಕಾರಣಕ್ಕೆ ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿತ್ತು. ಆದರೆ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ 14 ತಿಂಗಳಿಗೇ ಪತನವಾಗಿತ್ತು. ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿಯಿಂದ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕ್ರಮವಾಗಿ ಮುಖ್ಯಮಂತ್ರಿಗಳಾಗಿದ್ದರು. ಅದಾದ ಬಳಿಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದ ಕಾರಣ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಲೋಕದಳದಿಂದ ಆರಂಭವಾದ ಸಿದ್ದರಾಮಯ್ಯ ಅವರ ರಾಜಕೀಯ ಜೀವನವು, ಜನತಾದಳ ಮತ್ತು 2006 ರಿಂದ ಕಾಂಗ್ರೆಸ್‌ನಲ್ಲಿ ಮುಂದುವರೆದಿದೆ.
ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಿಎಂಗಳಲ್ಲಿ ದೇವರಾಜ ಅರಸು ಅವರ ನಂತರ ಎಸ್ ನಿಜಲಿಂಗಪ್ಪ(7 ವರ್ಷ 175 ದಿನಗಳು), ರಾಮಕೃಷ್ಣ ಹೆಗಡೆ(5 ವರ್ಷ 216 ದಿನಗಳು), ಮತ್ತು ಬಿ.ಎಸ್. ಯಡಿಯೂರಪ್ಪ (5 ವರ್ಷ 82 ದಿನಗಳು) ಇದ್ದಾರೆ.
ಇನ್ನು ದೇವರಾಜ ಅರಸು ದಾಖಲೆ ಮುರಿಯುತ್ತಿರುವ ಇಂದು ಮೈಸೂರಿನಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಜನರ ಅರ್ಶಿವಾದದಿಂದ ನಾಳೆಗೆ ದೇವರಾಜು ಅರಸು ಅವರ ದೀರ್ಘವಾದಿ ಅಡಳಿತ ದಾಖಲೆ ಬ್ರೇಕ್ ಅಗುತ್ತಿದೆ. ನನಗೆ ಖುಷಿ ಏನೆಂದರೆ ದೇವರಾಜ ಅರಸು ಹಾಗೂ ನಾನು ಒಂದೇ ಜಿಲ್ಲೆಯವರು ಎಂದರು.
ನನಗೂ ದೇವರಾಜ ಅರಸು ಅವರಿಗೂ ಹೋಲಿಕೆ ಇಲ್ಲ.ಯಾವುದೇ ದಾಖಲೆ ಶಾಶ್ವತವಲ್ಲ. ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್ ಕೋಹ್ಲಿ ಮುರಿದಿಲ್ಲವೇ? ಮುಂದೆ ಯಾರಾದರೂ ನನ್ನ ದಾಖಲೆಯನ್ನು ಮುರಿಯಬಹುದು. ನನಗಿಂತ ಹೆಚ್ಚಿನ ಬಜೆಟ್ ಮಂಡಿಸುವವರು ಕೂಡ ಬರಬಹುದು. ಹೀಗಾಗಿ ನನ್ನ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂದು ನಾನು ಹೇಳುವುದಿಲ್ಲ ಎಂದರು.
ಬಜೆಟ್ ಮಂಡನೆಯಲ್ಲೂ ದಾಖಲೆ
ರಾಜ್ಯ ಬಜೆಟ್ ಮಂಡನೆಯಲ್ಲೂ ಸಿಎಂ ಸಿದ್ದರಾಮಯ್ಯ ದಾಖಲೆ ಬರೆದಿದ್ದು, ಇದುವರೆಗೂ 16 ಬಜೆಟ್ ಮಂಡಿಸಿದ್ದಾರೆ. ಒಟ್ಟು 13 ಬಜೆಟ್ ಮಂಡಿಸಿರುವ ರಾಮಕೃಷ್ಣ ಹೆಗಡೆ ಎರಡನೇ ಸ್ಥಾನದಲ್ಲಿದ್ದಾರೆ.