ಬಂಟ್ವಾಳ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಫೋಟೋ ಬಳಸಿ ಅವಹೇಳನಕಾರಿ ಬರಹಗಳನ್ನು ಹಾಗೂ ಸುಳ್ಳು ಅಪಪ್ರಚಾರ ನಡೆಸಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪ್ರಚಾರ ಮಾಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಪೋಟೋವನ್ನು ಹಾಕಿ ಇವರು ನಮ್ಮನ್ನಗಲಿದ್ದಾರೆಂದು ಬರೆದು ಪೋಸ್ಟ್ ಹಾಕಿದ್ದಲ್ಲದೆ, ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ ಎಂದು ಬಿಜೆಪಿಯನ್ನು ಅಣಕಿಸಲಾಗಿದ್ದು, ಘಟನೆ ಬಗ್ಗೆ ಸುಳ್ಯ ಬಿಜೆಪಿ ಯುವಮೋರ್ಚಾ ವತಿಯಿಂದ ಸುಳ್ಯ ಪೊಲೀಸರಿಗೆ ದೂರು ನೀಡಲಾಗಿದೆ.
ಬಿಲ್ಲವ ಸಂದೇಶ್ ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಚಿತ್ರ ಬಳಸಿ ಅವರನ್ನು ನಿಂದಿಸಿ, ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿದೆ.
ದಲಿತ ಸಮುದಾಯದ ಶಾಸಕಿ ಭಾಗೀರಥಿ ಮುರುಳ್ಯ ಶೋಷಣೆಗೊಳಗಾದ ದಲಿತ ಸಮುದಾಯದ ಪರ ನಿಲ್ಲದೆ ಇಂದು ಎಲ್ಲರನ್ನು ಅಗಲಿ ತೆರಳಿದ್ದಾರೆ. ಇವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಬ್ಲೂಜೇಪಿ ಪಕ್ಷದ ಕಾರ್ಯಕರ್ತರಿಗೆ ದೇವರು ನೀಡಲಿ ಎಂದು ಹೇಳುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ" ಅಂತ ಪೋಸ್ಟ್ ಹಾಕಲಾಗಿದೆ.
‘ಬಿಲ್ಲವ ಸಂದೇಶ’ ಎಂಬ ಫೇಸ್ ಬುಕ್ ಖಾತೆಯಲ್ಲಿ ಸುಳ್ಯ ಶಾಸಕಿಯ ಫೋಟೋ ಬಳಸಿ ಅವಹೇಳನಕಾರಿ ಬರಹ ಹಾಗೂ ಸುಳ್ಳು ಅಪಪ್ರಚಾರ ಮಾಡಲಾಗಿದೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕಿ ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವುದನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಖಂಡಿಸಿದ್ದಾರೆ.
ಶಾಸಕಿ ಭಾಗೀರಥಿ ಮುರುಳ್ಯ ಅವರು ಶೋಷಿತ ಸಮುದಾಯದಿಂದ ಬಂದು ಜನಸೇವೆಯಲ್ಲಿ ತೊಡಗಿದ್ದಾರೆ. ಶಾಸಕಿಯ ವಿರುದ್ಧ ಕೀಳುಮಟ್ಟದಲ್ಲಿ ಬರೆದಿರುವುದು ಖಂಡನೀಯ. ಜಾಲತಾಣದಲ್ಲಿ ಜನಪ್ರತಿನಿಧಿಗಳನ್ನು ಈ ರೀತಿ ತೇಜೋವಧೆ ಮಾಡಿರುವುದು ಗಂಭೀರವಾದ ವಿಚಾರ ಎಂದು ಹೇಳಿದ್ದಾರೆ.