ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಕಳೆದ 28 ವರ್ಷಗಳಿಂದ ವಾಸಿಸುತ್ತಿದ್ದೇವೆ ಎಂಬ ಕೆಲವು ನಿವಾಸಿ ಅರ್ಜಿದಾರರ ವಾದವನ್ನು ತಿರಸ್ಕರಿಸಿದ ರಾಜ್ಯ ಸರ್ಕಾರ, ಕೋಗಿಲುವಿನ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ಫಕೀರ್ ಮತ್ತು ವಾಸಿಮ್ ಕಾಲೋನಿಗಳಲ್ಲಿ ಪ್ರತಿಯೊಂದು ಮನೆಗಳನ್ನು ಯಾವಾಗ ನಿರ್ಮಿಸಲಾಗಿದೆ ಎಂಬುದನ್ನು ತೋರಿಸಲು ತನ್ನ ಬಳಿ ಉಪಗ್ರಹ ಚಿತ್ರಗಳಿವೆ ಎಂದು ಹೈಕೋರ್ಟ್ ಗೆ ತಿಳಿಸಿದೆ.
ಅರ್ಜಿದಾರರು 28 ವರ್ಷಗಳಿಂದ ತಾವು ಕಾಲೋನಿಗಳಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ವಿಭಾಗೀಯ ಪೀಠದ ಮುಂದೆ ಅಡ್ವೊಕೇಟ್ ಜನರಲ್ (ಎಜಿ) ಕೆ. ಶಶಿಕರನ್ ಶೆಟ್ಟಿ ಗಮನಸೆಳೆದರು. ವಾಸ್ತವವಾಗಿ ಇದು ತಪ್ಪು ಮಾಹಿತಿ, ಇತ್ತೀಚೆಗೆ ಕೆಡವಲಾದ ಮನೆಗಳನ್ನು ಯಾವಾಗ ನಿರ್ಮಿಸಲಾಗಿದೆ ಎಂಬುದನ್ನು ತೋರಿಸಲು ರಾಜ್ಯ ಸರ್ಕಾರದ ಬಳಿ ಸ್ಯಾಟ್ ಲೈಟ್ ಚಿತ್ರಗಳಿವೆ ಎಂದು ಎಜಿ ಹೇಳಿದರು.
ಫಕೀರ್ ಮತ್ತು ವಾಸಿಮ್ ಕಾಲೋನಿಗಳಿಂದ ಹೊರಹಾಕಲ್ಪಟ್ಟ ನಿವಾಸಿಗಳಲ್ಲಿ ಜೈಬಾ ತಬಸ್ಸುಮ್, ರೆಹಾನಾ ಮತ್ತು ಆರೀಫಾ ಬೇಗಂ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್)ಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು.
ಕಾನೂನು ಪ್ರಕ್ರಿಯೆ ಮತ್ತು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಪಾಲಿಸದೆಯೇ ತಮ್ಮನ್ನು ಹೊರಹಾಕಲಾಗಿದೆ ಎಂಬ ಅರ್ಜಿದಾರರ ಹೇಳಿಕೆಯನ್ನು ನಿರಾಕರಿಸಿದ ಎಜಿ, ಸುಪ್ರೀಂ ಕೋರ್ಟ್ ತೀರ್ಪು ಪ್ರಸ್ತುತ ಪ್ರಕರಣಕ್ಕೆ ಅನ್ವಯಿಸುವುದಿಲ್ಲ. ಅರ್ಜಿದಾರರು ಮನೆಗಳನ್ನು ನಿರ್ಮಿಸಿಕೊಂಡಿದ್ದ ಭೂಮಿ ಕೊಳೆಗೇರಿ ಅಲ್ಲ, ಆದರೆ ಆರಂಭದಲ್ಲಿ ಕಲ್ಲುಗಣಿಗಾರಿಕೆಗೆ ಮತ್ತು ನಂತರ ನಗರದ ಕಸವನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತು ಎಂದು ವಾದಿಸಿದರು.
ಸ್ಥಳಾಂತರಗೊಂಡ ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯ ನೀಡುವ ಬಗ್ಗೆ ನ್ಯಾಯಾಲಯ ಕೇಳಿದಾಗ, ಕೋರ್ಟ್ ಮುಂದಿನ ಆದೇಶಗಳನ್ನು ನೀಡುವವರೆಗೆ ಕುಟುಂಬಗಳಿಗೆ ಮೂರು ವಿಭಿನ್ನ ಪ್ರದೇಶಗಳಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳಲ್ಲಿ ವಸತಿ ಕಲ್ಪಿಸಲಾಗಿದೆ ಎಂದು ಎಜಿ ವಾದಿಸಿದರು. ಅವರಿಗೆ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಆಹಾರವನ್ನು ಸರಬರಾಜು ಮಾಡಲಾಗುತ್ತದೆ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲರು ಡಿಸೆಂಬರ್ 20 ರಂದು ಕಟ್ಟಡ ಧ್ವಂಸದ ನಂತರ ಸುಮಾರು 3,000 ಜನರನ್ನು ಒಳಗೊಂಡ ಸುಮಾರು 300 ಕುಟುಂಬಗಳಿಗೆ ಆಹಾರ ಮತ್ತು ಕಂಬಳಿಗಳು ಬೇಕಾಗಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಒಂದು ವಾರದೊಳಗೆ ರಾಜ್ಯ ಸರ್ಕಾರ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಮತ್ತು ಸರ್ಕಾರದ ಪ್ರತಿಕ್ರಿಯೆಗೆ ತಮ್ಮ ಉತ್ತರವನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಕೋರ್ಟ್ ಸೂಚಿಸಿದೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜನವರಿ 22 ಕ್ಕೆ ಮುಂದೂಡಿತು.
ಕಾನೂನಿನ ಪ್ರಕಾರ ಎಲ್ಲಾ ಸಂತ್ರಸ್ತರಿಗೆ ಪುನರ್ವಸತಿ ಮತ್ತು ಪರ್ಯಾಯ ವಸತಿ ಒದಗಿಸಲು ನಿರ್ದೇಶನಗಳನ್ನು ನೀಡುವಂತೆ ಮತ್ತು ಪುನರ್ವಸತಿಗೆ ಅವರ ಅರ್ಹತೆಯನ್ನು ಗುರುತಿಸಲು ಸಮೀಕ್ಷೆ ನಡೆಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.
ಸಂತ್ರಸ್ತರು ತಮ್ಮ ಜೀವನೋಪಾಯವನ್ನು ಮುಂದುವರಿಸಲು ಅನುವು ಮಾಡಿಕೊಡಲು 30 ವರ್ಷಗಳಲ್ಲಿ ನಿರ್ಮಿಸಲಾದ ಮನೆಗಳು, ವಸ್ತುಗಳು ಮತ್ತು ಜೀವನೋಪಾಯದ ನಷ್ಟಕ್ಕೆ ಪರಿಹಾರವನ್ನು ಒದಗಿಸಲು ಅರ್ಜಿದಾರರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.