ಬೆಂಗಳೂರು: ಮಧ್ಯರಾತ್ರಿಯಲ್ಲಿ ಹೊಂಚು ಹಾಕಿ ಅಣ್ಣನ ಮನೆ ಸುಡಲು ಹೋಗಿ ಅದೇ ಬೆಂಕಿಯಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿರುವ ಘಟನೆಯೊಂದು ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ.
ಮುನಿರಾಜು ಗಾಯಗೊಂಡು ಆಸ್ಪತ್ರೆ ಸೇರಿರುವ ವ್ಯಕ್ತಿಯಾಗಿದ್ದು. ಅತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಘಟನೆಯ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ 8 ವರ್ಷಗಳಿಂದ ಗ್ರಾಮದಲ್ಲಿ ಪಟಾಕಿ ಚೀಟಿ ನಡೆಸಿ ಮುನಿರಾಜು ಕೈಸುಟ್ಟುಕೊಂಡಿದ್ದರು, ಚೀಟಿ ಹಾಕಿದ್ದವರು ಹಣ ವಾಪಸ್ ನೀಡುವಂತೆ ಗಲಾಟೆ ಮಾಡಿದ ಕಾರಣ ಸ್ವಲ್ಪ ಜಮೀನು ಮಾರಿ ಕುಟುಂಬಸ್ಥರು ಹಣ ನೀಡಿದ್ದರು. ಆದರೆ ಆ ಹಣ ಸಾಕಾಗದ ಕಾರಣ ಉಳಿದ ಜಮೀನು ಸಹ ಮಾರಾಟ ಮಾಡಿ ಹೆಚ್ಚಿನ ನೀಡುವಂತೆ ಮುನಿರಾಜು ಕೇಳಿದ್ದ.
ಆದರೆ, ಇರುವ ಅಲ್ಪ ಸ್ವಲ್ಪ ಜಮೀನು ಮಾರಲ್ಲ ಎಂದು ಅಣ್ಣ ಸ್ಪಷ್ಟವಾಗಿ ಹೇಳಿದ್ದ. ಹೀಗಾಗಿ ಸಹೋದರ ರಾಮಕೃಷ್ಣ ಕುಟುಂಬವನ್ನೇ ಮುಗಿಸುವ ಸಂಚುಮಾಡಿದ್ದ ಮುನಿರಾಜು, ಮನೆಯ ಬಾಗಿಲಿನ ಚಿಲಕ ಹಾಕಿ ನಂತರ ರೂಂನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಆದರೆ, ಬೆಂಕಿ ಹಚ್ಚುವ ವೇಳೆ ಈತನ ಕೈನಲ್ಲಿ ಪೆಟ್ರೋಲ್ ಡಬ್ಬ ಇದ್ದ ಕಾರಣ ಬೆಂಕಿ ಈತನನ್ನೇ ಸುಟ್ಟಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾಪಾಡಿ ಕಾಪಾಡಿ ಎಂದು ಮುನಿರಾಜು ಕಿರುಚಾಡಿದ್ದಾನೆ.
ಇತ್ತ ಒಳಗಡೆ ಪುಟ್ಟ ಮಗು ಜೊತೆ ಸಹೋದರ ರಾಮಕೃಷ್ಣ ಸಹ ಬೆಂಕಿಯ ಹೊಗೆಯಲ್ಲಿ ನರಳಾಡಿ ಅಕ್ಕಪಕ್ಕದವರನ್ನ ಸಹಾಯಕ್ಕೆ ಕೂಗಿದ್ದಾರೆ. ಜೊತೆಗೆ ಮನೆಯಿಂದ ಹೊರಗಡೆ ಬರಲು ಯತ್ನಿಸಿದರೆ ಬೆಂಕಿ ಹಚ್ಚುವ ಮೊದಲೇ ಮುನಿರಾಜು ಮನೆಯ ಬಾಗಿಲನ್ನು ಲಾಕ್ ಮಾಡಿದ್ದು, ಹೊರ ಬರಲಾಗದೆ ಪರದಾಡಿದ್ದಾರೆ.
ಇನ್ನು ಅಕ್ಕ ಪಕ್ಕದ ಮನೆಯವರು ಕಿರುಚಾಟ ಕೇಳಿ ಅಣ್ಣ, ತಮ್ಮಂದಿರ ಸಹಾಯಕ್ಕೆ ಬಂದಿದ್ದು ರಾಮಕೃಷ್ಣ ಕುಟುಂಬವನ್ನ ರಕ್ಷಿಸಿದ್ದಾರೆ. ಜೊತೆಗೆ ಬೆಂಕಿಯಲ್ಲಿ ಬೆಂದು ನರಳಾಡುತ್ತಿದ್ದ ಮುನಿರಾಜು ನನ್ನು ಸಹ ರಕ್ಷಿಸಿದ್ದಾರೆ. ಬಳಿಕ ಹೊಸಕೋಟೆ ಆಸ್ವತ್ರೆಗೆ ದಾಖಲಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ವತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ತಿರುಮಲಶೆಟ್ಟಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.