

ಬೆಂಗಳೂರು: ತಾನು ಪ್ರೀತಿಸಿದ ಹುಡುಗಿಯ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೇ ಆಕೆಯ ತಾಯಿಗೆ ಬೆಂಕಿ ಹಾಕಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಬೆಂಗಳೂರಿನ ಬಸವೇಶ್ವರನಗರದ ಸಾಣೇಗುರುವನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 40 ವರ್ಷದ ಗೀತಾ ಎಂಬುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಡಿ.22ರಂದು ಈ ಘಟನೆ ನಡೆದಿತ್ತು.
ಪುತ್ರಿಯ ಪ್ರಿಯಕರ ಬೆಂಕಿ ಹಚ್ಚಿದ ಪರಿಣಾಮ ತೀವ್ರ ಸುಟ್ಟ ಗಾಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಗೀತಾ (40) ಅವರು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಕಳೆದ 16 ದಿನಗಳಿಂದ ಗೀತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ತಮಿಳುನಾಡಿನ ಗೀತಾ ಅವರು ಮಗಳ ಜತೆ ಬಸವೇಶ್ವರನಗರದ ಸಾಣೇಗುರುವನಹಳ್ಳಿಯಲ್ಲಿ ವಾಸವಾಗಿದ್ದರು. ಅವರು ಮನೆಯ ಸಮೀಪವೇ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಗೀತಾ ಅವರ ಪುತ್ರಿ ಹಾಗೂ ಆರೋಪಿ ಮುತ್ತು ಅಭಿಮನ್ಯು ಪರಸ್ಪರ ಪ್ರೀತಿಸುತ್ತಿದ್ದರು.
ಈ ವಿಚಾರ ತಿಳಿದಿದ್ದ ಗೀತಾ ಅವರು ಮಗಳನ್ನು ಮುತ್ತುಗೆ ಕೊಟ್ಟು ಮದುವೆ ಮಾಡುವುದಾಗಿ ಹಿಂದೆಯೇ ಮಾತುಕತೆ ನಡೆಸಿದ್ದರು. ಆದರೆ, ಆರೋಪಿಯ ಇತ್ತೀಚಿನ ವರ್ತನೆಯಿಂದ ಬೇಸತ್ತು, ಮದುವೆಗೆ ನಿರಾಕರಿಸಿದ್ದರು ಎನ್ನಲಾಗಿದೆ.
ಮದುವೆ ನಿರಾಕರಿಸಿದ್ದಕ್ಕೆ ಬೆಂಕಿ ಹಾಕಿದ
ಆರು ತಿಂಗಳಿಂದ ಗೀತಾ ಅವರ ಮನೆಯಲ್ಲೇ ಆರೋಪಿ ವಾಸವಾಗಿದ್ದ. ಮದ್ಯವ್ಯಸನಿಯಾದ ಆತ ಪ್ರತಿನಿತ್ಯ ಮದ್ಯಪಾನ ಮಾಡುತ್ತಿದ್ದ. ಇದರಿಂದ ಗೀತಾ ಅವರು ಅಸಮಾಧಾನಗೊಂಡಿದ್ದರು. ಮದುವೆ ಮಾಡಿಕೊಡುವಂತೆ ಆರೋಪಿ ಒತ್ತಡ ಹೇರುತ್ತಿದ್ದ.
ಗೀತಾ ಅವರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಡಿ.22ರಂದು ರಾತ್ರಿ ಜಗಳವಾಡಿದ್ದ. ಬಳಿಕ ಗೀತಾ ಅವರು ನಿದ್ದೆಗೆ ಜಾರಿದಾಗ ಆರೋಪಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ಹೇಳಿದರು.
ಘಟನೆ ವೇಳೆ ಮನೆಯಲ್ಲೇ ಇದ್ದ ಗೀತಾ ಅವರ ಮಗಳು ನೆರೆಹೊರೆಯವರ ಸಹಾಯದಿಂದ ಬೆಂಕಿ ನಂದಿಸಿ, ತಾಯಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಗೀತಾ ಅವರಿಗೆ ಶೇ 50ರಷ್ಟು ಸುಟ್ಟ ಗಾಯಗಳಾಗಿದ್ದ ಪರಿಣಾಮ ಅವರ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ಹೇಳಿದರು.
ತಮಿಳುನಾಡಿಗೆ ಪರಾರಿ
ಕೃತ್ಯ ಎಸಗಿದ ಬಳಿಕ ತಮಿಳುನಾಡಿಗೆ ಆರೋಪಿ ಮುತ್ತು ಅಭಿಮನ್ಯು ಪರಾರಿಯಾಗಿದ್ದ. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆರೋಪಿ ಮುತ್ತು ಅಭಿಮನ್ಯುವನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
Advertisement