ಮಡಿಕೇರಿ: ಕೊಡಗಿನ ಕಾವೇರಿ ನದಿ ಸಂರಕ್ಷಣೆಗೆ ಕೇಂದ್ರ ಸರ್ಕಾರ ಬೆಂಬಲ ನೀಡಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದಿದ್ದಾರೆ.
ನದಿಯ ಮಾಲಿನ್ಯವನ್ನು ತಡೆಗಟ್ಟುವ ತಕ್ಷಣದ ಅಗತ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದು, ಕೇಂದ್ರ ಬಜೆಟ್‌ನಲ್ಲಿ ಕಾವೇರಿ ಸಂರಕ್ಷಣಾ ಯೋಜನೆಗಳಿಗೆ ಹಣ ಮೀಸಲಿಡುವಂತೆ ಕೋರಿದ್ದಾರೆ.
ಜಿಲ್ಲೆಯಾದ್ಯಂತ ಕಾವೇರಿ ನದಿ ದಡಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ತಕ್ಷಣದಿಂದಲೇ ಕೈಗೊಳ್ಳಬೇಕಾಗಿದೆ. ಮನೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ನದಿ ದಡದ ಒತ್ತುವರಿಯಿಂದ ಸಂಸ್ಕರಿಸದ ತ್ಯಾಜ್ಯ ನೀರು ಹರಿಯುವುದರಿಂದ ನದಿಯು ಹೆಚ್ಚಾಗಿ ಮಾಲಿನ್ಯಗೊಂಡಿದೆ. ಈ ಸಮಸ್ಯೆಗಳು ನೀರಿನ ಗುಣಮಟ್ಟ, ಸಾರ್ವಜನಿಕ ಆರೋಗ್ಯ, ನದಿ ಪರಿಸರ ಮತ್ತು ನದಿಯನ್ನು ಅವಲಂಬಿಸಿರುವ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಕಾವೇರಿ ನದಿಯ ಒತ್ತುವರಿ ತೆರವು ನಂತರ ವ್ಯವಸ್ಥಿತವಾಗಿ ನದಿ ದಂಡೆ ಅಭಿವೃದ್ಧಿಗೆ ಅನುವು ಮಾಡಿಕೊಡಲು ಜಿಲ್ಲೆಯ ಕಾವೇರಿ ನದಿಯ ಗಡಿಗಳ ಸಮಗ್ರ ಸಮೀಕ್ಷೆಗೆ ಆದೇಶ ನೀಡುವಂತೆ ಅವರು ಕೇಂದ್ರ ಸಚಿವರನ್ನು ಒತ್ತಾಯಿಸಿದ್ದಾರೆ.
ಮಡಿಕೇರಿ, ವಿರಾಜಪೇಟೆ ಮತ್ತು ಕುಶಾಲನಗರ ತಾಲೂಕುಗಳಲ್ಲಿ ನದಿ ದಡದ ಚಟುವಟಿಕೆಗಳನ್ನು ನಿಯಂತ್ರಿಸುವುದರ ಜೊತೆಗೆ ವೈಜ್ಞಾನಿಕವಾಗಿ ಒಳಚರಂಡಿ ಸೌಲಭ್ಯ ಕಲ್ಪಿಸಬೇಕು. ನದಿ ತೀರದ ಪ್ರವಾಸಿ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಪ್ರವಾಹ ಸಮಸ್ಯೆಗಳನ್ನು ಪರಿಹರಿಸಲು ಮಧ್ಯಸ್ಥಿಕೆಗೆ ಗಮನ ಹರಿಸಬೇಕು, ಪರಿಸರ ಸ್ನೇಹಿ ನದಿದಡಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ.
ಕಾವೇರಿ ನದಿ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಹಂತ ಹಂತದ ಕ್ರಿಯಾ ಯೋಜನೆಯನ್ನು ರೂಪಿಸಬೇಕು. ಕಾವೇರಿ ನದಿ ಸಂರಕ್ಷಣೆ, ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ ಹಾಗೂ ನದಿ ದಡ ಸಂರಕ್ಷಣಾ ಕಾಮಗಾರಿಗಳಿಗೆ ಮುಂಬರುವ ಬಜೆಟ್‌ನಲ್ಲಿ ಹಣ ನೀಡುವಂತೆ ಮನವಿ ಮಾಡಿದ್ದಾರೆ.