ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(ಬಿಎಂಆರ್‌ಸಿಎಲ್) 2027ರ ಅಂತ್ಯದ ವೇಳೆಗೆ ನಗರದ ಬಹುನಿರೀಕ್ಷಿತ ವಿಮಾನ ನಿಲ್ದಾಣ ಮೆಟ್ರೋ ಮಾರ್ಗವನ್ನು ಕಾರ್ಯರೂಪಕ್ಕೆ ತರುವ ಗುರಿಯನ್ನು ಹೊಂದಿದೆ.
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗದ ಕಾಮಗಾರಿ ಪೂರ್ಣಗೊಂಡ ನಂತರ, ಬೆಂಗಳೂರಿನ ಮೆಟ್ರೋ ಜಾಲವು 175 ಕಿ.ಮೀ.ಗಳಿಗೆ ವಿಸ್ತರಿಸಲಿದ್ದು, ಈ ಹೊಸ ಮಾರ್ಗವು ನಗರದ ಮೆಟ್ರೋ ಇತಿಹಾಸದಲ್ಲಿ ಅತಿದೊಡ್ಡ ಏಕೈಕ ವಿಸ್ತರಣೆಯಾಗಲಿದೆ.
ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಮತ್ತು ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ ಜಂಟಿಯಾಗಿ ಆಯೋಜಿಸಿದ್ದ ಸಭೆಯಲ್ಲಿ 'ಬೆಂಗಳೂರಿನ ನಗರ ಸವಾಲು' ಕುರಿತ ಪ್ಯಾನೆಲ್ ಚರ್ಚೆಯಲ್ಲಿ ಬಿಎಂಆರ್‌ಸಿಎಲ್ ಸಲಹೆಗಾರ (ಸಿವಿಲ್) ಅಭಯ್ ಕುಮಾರ್ ರೈ ಅವರು ಈ ಮಾಹಿತಿ ನೀಡಿದ್ದಾರೆ.
ಬಿಎಂಆರ್‌ಸಿಎಲ್‌ನ ವಿಸ್ತರಣಾ ಮಾರ್ಗಸೂಚಿಯನ್ನು ವಿವರಿಸಿದ ರೈ, 44 ಕಿ.ಮೀ.ಗಳನ್ನು ಒಳಗೊಂಡ ಹಂತ-3, ಪ್ರಸ್ತುತ ಪ್ರಗತಿಯಲ್ಲಿದೆ. ಆದರೆ ಹಂತ-3ಎ(36 ಕಿ.ಮೀ) ಗಾಗಿ ವಿವರವಾದ ಯೋಜನಾ ವರದಿಗಳು(ಡಿಪಿಆರ್‌ಗಳು) ಸಿದ್ಧವಾಗಿವೆ ಮತ್ತು ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದರು.
ಇದಲ್ಲದೆ, ಭವಿಷ್ಯದ ಕಾರಿಡಾರ್‌ಗಳಿಗಾಗಿ 200 ಕಿಲೋ ಮೀಟರ್‌ಗಿಂತ ಹೆಚ್ಚು ಉದ್ದದ ಮಾರ್ಗಗಳ ಬಗ್ಗೆ ಸಾಧ್ಯತಾ ಅಧ್ಯಯನಗಳು ನಡೆಯುತ್ತಿದ್ದು, ಇದು ಬೆಂಗಳೂರಿನ ದೀರ್ಘಾವಧಿಯ ಸಂಚಾರ ಅಗತ್ಯಗಳನ್ನು ಪೂರೈಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಇನ್ನೂ ಮೆಟ್ರೋ ಕಾರ್ಯಾಚರಣೆಗಳಲ್ಲಿ ಪುನರುತ್ಪಾದಕ ಬ್ರೇಕಿಂಗ್ ಸೇರಿದಂತೆ ಕಾರ್ಯಕ್ಷಮ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರ ಮೂಲಕ ಶೇಕಡ 30ಕ್ಕಿಂತ ಹೆಚ್ಚು ವಿದ್ಯುತ್ ಉಳಿತಾಯ ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರು.
ಈ ಪ್ಯಾನೆಲ್ ಚರ್ಚೆಯಲ್ಲಿ ಸಂಚಾರ (ಮೊಬಿಲಿಟಿ), ನೀರು, ಹವಾಮಾನ ಮತ್ತು ಮೂಲಸೌಕರ್ಯ ಕ್ಷೇತ್ರಗಳ ತಜ್ಞರು ಭಾಗವಹಿಸಿದ್ದರು. ನಗರ ಎದುರಿಸುತ್ತಿರುವ ಸ್ಥಿರತೆಯ ಸವಾಲುಗಳಾದ ವಿಭಜಿತ ಸಂಚಾರ ವ್ಯವಸ್ಥೆಗಳು, ನೀರಿನ ಅಸುರಕ್ಷತೆ ಹಾಗೂ ನಿಯಂತ್ರಣ ಚೌಕಟ್ಟುಗಳು ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನದ ನಡುವಿನ ಅಂತರ ಕುರಿತು ಚರ್ಚೆ ನಡೆಸಲಾಯಿತು.