ಕುಣಿಗಲ್ ನಗರದ ಇತಿಹಾಸದಲ್ಲೇ ಮೊಟ್ಡ ಮೊದಲ ಬಾರಿಗೆ ಸುಮಾರು 35 ಸಾವಿರ ಜನರ ಸಮ್ಮುಖದಲ್ಲಿ 'ಕುಣಿಗಲ್ ಉತ್ಸವ ಮುಕ್ತಾಯವಾಯಿತು. ಬೃಹತ್ ಸೆಟ್‌ನಲ್ಲಿ ಶಾಸಕ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ಮೂರು ದಿನಗಳ ಈ ವರ್ಣರಂಜಿತ ಸಮಾರಂಭಕ್ಕೆ ತೆರೆಬಿತ್ತು.
ನಿನ್ನೆ ಕೊನೆಯ ದಿನದ ಸಮಾರಂಭದಲ್ಲಿ ಸಿನಿಮಾ ತಾರೆಯರಾದ ಕಿಚ್ಚ ಸುದೀಪ್, ಮಾಲಾಶ್ರೀ, ಅನು ಪ್ರಭಾಕರ್, ನೆನಪಿರಲಿ ಪ್ರೇಮ್, ಡಾಲಿ ಧನಂಜಯ್, ಜೈದ್ ಖಾನ್, ಆರಾಧನಾ ರಾಮ್, ನಿರ್ಮಾಪಕ ಸಂಜಯ್ ಗೌಡ್ರು ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ತಾರೆಗಳು ಸೇರಿದ್ದರು. ಕೊರೆವ ಚಳಿಯನ್ನೂ ಲೆಕ್ಕಿಸದೇ 35 ರಿಂದ 40 ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಸತತ ಮೂರು ಗಂಟೆಗಳ ಕಾಲ ನಡೆದ ನವೀನ್ ಸಜ್ಜು, ಚಂದನ್ ಶೆಟ್ಟಿ ಅವರ ಸಂಗೀತ ಸಂಜೆ ಕಾರ್ಯಕ್ರಮವನ್ನು ಖುಷಿಯಿಂದ ಆನಂದಿಸಿದರು.
ವೈರಲ್ ಆದ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮಾತು
ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತದೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆ, ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತಿವೆಯಲ್ಲವೇ ಎಂದು ಕೇಳಿದಾಗ ಜನಸಮೂಹದಲ್ಲಿ ಕೆಲವು ಮಹಿಳೆಯರು ಇಲ್ಲಾ, ಇಲ್ಲಾ ಎಂದು ಕೈ ತೋರಿಸಿದರು. ಆಗ ಡಿ ಕೆ ಶಿವಕುಮಾರ್ ಶೇಕಡಾ 99ರಷ್ಟು ಮಂದಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಕೆಲವರಿಗೆ ಸಿಗುತ್ತಿರಲಿಕ್ಕಿಲ್ಲ ಎಂದರು. ಇದನ್ನು ಬಿಜೆಪಿ ನಾಯಕರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಇದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಗ್ಯತೆ ಎಂದು ವ್ಯಂಗ್ಯವಾಡಿದೆ.
ನಟ್ಟು ಬೋಲ್ಟ್ ವಿವಾದಕ್ಕೆ ತೆರೆ
ಡಿಸಿಎಂ ಡಿಕೆ ಶಿವಕುಮಾರ್ ಕಿಚ್ಚ ಸುದೀಪ್ ಗೆ ಸನ್ಮಾನ ಮಾಡಿದರು. ಕೆಲವು ಸಮಯ ಹಿಂದೆ ಕನ್ನಡ ಚಿತ್ರರಂಗದವರ ನಟ್ಟು ಬೋಲ್ಟ್ ಟೈಟ್ ಮಾಡೋದು ಹೇಗೆ ಎಂದು ನಮಗೆ ಚೆನ್ನಾಗಿ ಗೊತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ನೀಡಿದ್ದ ಹೇಳಿಕೆಗೆ ನಟ ಕಿಚ್ಚ ಸುದೀಪ್ ತಿರುಗೇಟು ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ನಂತರ ಇಬ್ಬರೂ ತಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ್ದರು. ಮೊನ್ನೆ ಬಿಗ್ ಬಾಸ್ ಕಾರ್ಯಕ್ರಮ ಆಯೋಜನೆಗೆ ವಿಘ್ನ ಎದುರಾದಾಗ ಡಿ ಕೆ ಶಿವಕುಮಾರ್ ಅವರೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು.
ನಿನ್ನೆ ಕುಣಿಗಲ್ ಉತ್ಸವದಲ್ಲಿ ಡಿ ಕೆ ಶಿವಕುಮಾರ್ ಅವರು ಕಿಚ್ಚ ಸುದೀಪ್ ಗೆ ಸನ್ಮಾನ ಮಾಡಿದ್ದಾರೆ. ಇಬ್ಬರೂ ವೇದಿಕೆಯಲ್ಲಿ ಆತ್ಮೀಯವಾಗಿದ್ದರು. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.