ಬೆಂಗಳೂರು: ಜನವರಿ 16 ರಂದು ಉಪ ಮುಖ್ಯಮಂತ್ರಿ ಮತ್ತು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾಷ್ಟ್ರ ರಾಜಧಾನಿ ನವದೆಹಲಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.
ವಿಧಾನಸಭಾ ಚುನಾವಣೆಗೆ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಲು ಜನವರಿ 16 ರಂದು ಡಿಕೆ.ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡುತ್ತಿದ್ದಾರೆಂದು ತಿಳಿದುಬಂದಿದೆ.
ಸಭೆಯ ಹೊರತಾಗಿ, ಶಿವಕುಮಾರ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಅಭ್ಯರ್ಥಿಗಳ ಆಯ್ಕೆಗಾಗಿ ವೀಕ್ಷಕರ ಸಮಿತಿಯ ಮುಖ್ಯಸ್ಥೆಯಾಗಿರುವ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಇದಲ್ಲದೆ,ಶಿವಕುಮಾರ್ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನೂ ಸಹ ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಶಿವಕುಮಾರ್ ಅವರು, ಸೋಮವಾರ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರು. ಈ ವೇಳೆ ಇಬ್ಬರೂ ನಾಯಕರು ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಮೈಸೂರಿನಲ್ಲಿ ರಾಹುಲ್'ಗೆ ಸಿಎಂ-ಡಿಸಿಎಂ ಸ್ವಾಗತ
ಇನ್ನು ಮಂಗಳವಾರ ಮೈಸೂರಿಗೆ ರಾಹುಲ್ ಗಾಂಧಿಯವರು ಭೇಟಿ ನೀಡುತ್ತಿದ್ದು, ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ವಾಗತ ಕೋರಲಿದ್ದಾರೆ.
ರಾಹುಲ್ ಮೈಸೂರಿಗೆ ಬಂದು ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರಿಗೆ ತೆರಳಲಿದ್ದಾರೆ.
ಸೇಂಟ್ ಥಾಮಸ್ ಇಂಗ್ಲಿಷ್ ಪ್ರೌಢಶಾಲೆಯ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸುವ ರಾಹುಲ್ ಅವರು, ಸಂಜೆ 4.30 ಕ್ಕೆ ಮೈಸೂರಿಗೆ ಹಿಂತಿರುಗಿ ದೆಹಲಿಗೆ ವಾಸಪ್ಪಾಗಲಿದ್ದಾರೆಂದು ಮೂಲಗಳು ತಿಳಿಸಿವೆ.