ಬೆಂಗಳೂರು: ಇತ್ತೀಚೆಗೆ ರಿಲೀಸ್ ಆಗಿರುವ ನಟ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಟಾಕ್ಸಿಕ್ ಟೀಸರ್ ನಲ್ಲಿ ತುಂಬಾ ಅಶ್ಲೀಲ ದೃಶ್ಯಗಳಿದ್ದು, ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳವಾರ ಮತ್ತೊಂದು ದೂರು ದಾಖಲಾಗಿದೆ.
ನಿನ್ನೆ ಎಎಪಿಯ ರಾಜ್ಯ ಮಹಿಳಾ ಘಟಕದ ನಾಯಕರು ರಾಜ್ಯ ಮಹಿಳಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ 'ಟಾಕ್ಸಿಕ್' ಟೀಸರ್ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಇಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಸೆನ್ಸಾರ್ ಮಂಡಳಿ(ಸಿಬಿಎಫ್ಸಿ)ಗೆ ದೂರು ನೀಡಿದ್ದಾರೆ.
ಟಾಕ್ಸಿಕ್ ಟೀಸರ್‌ನಲ್ಲಿ 'ಸೆಕ್ಸ್ ಪ್ರಚೋದಿಸುವ ಅಶ್ಲೀಲ ದೃಶ್ಯಗಳಿವೆ. ಅವು ಅಪ್ರಾಪ್ತ ವಯಸ್ಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೀಗಾಗಿ ‘ಟಾಕ್ಸಿಕ್’ ಸಿನಿಮಾಗೆ ಪ್ರಮಾಣ ಪತ್ರ ನೀಡಬಾರದು ಎಂದು ದಿನೇಶ್ ಕಲ್ಲಹಳ್ಳಿ ಅವರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ(CBFC) ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.
CBFC ಅಧ್ಯಕ್ಷೆ ಪ್ರಸೂನ್ ಜೋಶಿ ಅವರಿಗೆ ಸಲ್ಲಿಸಲಾದ ದೂರಿನ ದಾಖಲೆಯ ಪ್ರಕಾರ, ಟಾಕ್ಸಿಕ್ ಟೀಸರ್ 'ಅತ್ಯಂತ ಹೆಚ್ಚು ಅಶ್ಲೀಲವಾಗಿದ್ದು, ಲೈಂಗಿಕವಾಗಿ ಸ್ಪಷ್ಟ ಮತ್ತು ಅಸಭ್ಯ ಸ್ವಭಾವದ ದೃಶ್ಯಗಳನ್ನು' ಹೊಂದಿದೆ ಎಂದು ಕಲ್ಲಹಳ್ಳಿ ಪ್ರತಿಪಾದಿಸಿದ್ದಾರೆ.
'ಈ ಟ್ರೇಲರ್ ಅನ್ನು ಯಾವುದೇ ಪರಿಣಾಮಕಾರಿ ನಿರ್ಬಂಧವಿಲ್ಲದೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಸಾಮಾಜಿಕ ನೈತಿಕತೆಯನ್ನು ಈ ಟೀಸರ್ ಮೀರಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟೀಸರ್‌ನಲ್ಲಿನ ದೃಶ್ಯಗಳನ್ನು ಕೂಡಲೇ ತೆಗೆದು ಹಾಕಬೇಕು ಮತ್ತು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು' ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಟೀಸರ್ ಅನ್ನು ಜನವರಿ 8 ರಂದು ಯಶ್ ಅವರ 40ನೇ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿದೆ.
ಮಾರ್ಚ್ 19 ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.