ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ಬದಲಾವಣೆಯ ಜಗಳ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಬಣಗಳು ಮುಖಾಮುಖಿಯಾಗಲಿವೆ.
ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವುದು ಮತ್ತೊಂದು ತಿರುವು ಪಡೆದುಕೊಂಡಿದೆ. ಸಿದ್ದರಾಮಯ್ಯ ಅವರ ಆಪ್ತರಾಗಿರುವ ರಾಜಣ್ಣ ಅವರ ಎಂಟ್ರಿಯಿಂದ ತಮ್ಮ ಸೋದರ ಸಂಬಂಧಿ ಹಾಗೂ ಎಂಎಲ್‌ಸಿ ಎಸ್. ರವಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಬಯಸಿದ್ದ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಹಿನ್ನಡೆ ಎಂದು ಅರ್ಥೈಸಲಾಗುತ್ತಿದೆ.
ಸಚಿವ ಸ್ಥಾನದಿಂದ ತೆಗೆದುಹಾಕಲ್ಪಟ್ಟ ನಂತರವೂ ರಾಜಣ್ಣ ಸಹಕಾರಿ ಕ್ಷೇತ್ರದ ಮೇಲೆ ತಮ್ಮ ಹಿಡಿತವನ್ನು ಮುಂದುವರೆಸಿದ್ದಾರೆ. ಅವರು ಈಗಾಗಲೇ 110 ವರ್ಷಗಳಷ್ಟು ಹಳೆಯದಾದ ಅಪೆಕ್ಸ್ ಬ್ಯಾಂಕಿಗೆ ಎರಡು ಬಾರಿ ಅಧ್ಯಕ್ಷರಾಗಿದ್ದಾರೆ. ಅಕ್ಟೋಬರ್ 2001 ರಿಂದ ಏಪ್ರಿಲ್ 2005 ಮತ್ತು ಆಗಸ್ಟ್ 2015 ರಿಂದ ಸೆಪ್ಟೆಂಬರ್ 2020 ರವರೆಗೆ ಅಧ್ಯಕ್ಷರಾಗಿದ್ದರು.
ಅವರು ಈಗ ತುಮಕೂರು ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕಿನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದು ಅಪೆಕ್ಸ್ ಬ್ಯಾಂಕ್‌ಗೆ ನಾಮನಿರ್ದೇಶಿತರಾಗಿ ನಿಯೋಜಿಸಲ್ಪಟ್ಟಿದ್ದಾರೆ, ಆದರೆ ರವಿ ಬೆಂಗಳೂರು ಡಿಸಿಸಿ ಬ್ಯಾಂಕ್‌ನಿಂದ ಬರುತ್ತಿದ್ದಾರೆ.
ರಾಜ್ಯಾದ್ಯಂತ 18 ಡಿಸಿಸಿ ಬ್ಯಾಂಕುಗಳು ತಮ್ಮ ನಾಮನಿರ್ದೇಶಿತರನ್ನು ನಿಯೋಜಿಸಿವೆ, ಮೈಸೂರು-ಚಾಮರಾಜನಗರ ಬ್ಯಾಂಕ್ ಕೂಡ ಶೀಘ್ರದಲ್ಲೇ ನಾಮ ನಿರ್ದೇಶನ ಮಾಡುವ ನಿರೀಕ್ಷೆಯಿದೆ. ಔಪಚಾರಿಕವಾಗಿ ಚುನಾವಣೆಗಳು ಜನವರಿ 23 ರಂದು ನಿರ್ದೇಶಕರಾಗಿ ದೃಢೀಕರಣಕ್ಕಾಗಿ ನಡೆಯಲಿವೆ. ಎರಡು ವಾರಗಳ ನಂತರ, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಸಿದ್ದರಾಮಯ್ಯ ಮತ್ತು ರಾಜಣ್ಣ ಎಸ್, ರವಿ ಅವರನ್ನು ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡುವುದಾಗಿ ಶಿವಕುಮಾರ್ ಅವರಿಗೆ ಮಾತು ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ರಾಜಣ್ಣ ತಮ್ಮ ಸಚಿವ ಸಂಪುಟ ಸ್ಥಾನವನ್ನು ಕಳೆದುಕೊಂಡು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಬಯಸುತ್ತಿರುವುದರಿಂದ ಸನ್ನಿವೇಶ ಬದಲಾಗಿದೆ. ಎರಡೂ ಬಣಗಳ ನಡುವೆ ಒಪ್ಪಂದವಾದರೆ ರವಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೋ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ಸಮ್ಮತಿಸುತ್ತಾರೋ ಎಂಬುದನ್ನು ಕಾದು ನೋಡಬೇಕು.
ರಾಜಣ್ಣ ಅವರಿಗೆ ಪಕ್ಷಾತೀತವಾಗಿ ರಾಜ್ಯಾದ್ಯಂತ ವಿವಿಧ ಡಿಸಿಸಿ ಬ್ಯಾಂಕುಗಳಿಂದ ನಿಯೋಜಿತ ನಾಮನಿರ್ದೇಶಿತರು ಬೆಂಬಲ ನೀಡುತ್ತಿರುವುದರಿ ರಾಜಣ್ಣಗೆ ಪ್ಲಸ್ ಆಗಿದೆ. ಒಟ್ಟಾರೆಯಾಗಿ, 19 ನಿರ್ದೇಶಕರು ಅಧ್ಯಕ್ಷರನ್ನು ಆಯ್ಕೆ ಮಾಡಲು ಮತ ಚಲಾಯಿಸಲಿದ್ದಾರೆ.
ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರ ಎಂಎಲ್‌ಸಿ ಪುತ್ರ ಸೂರಜ್ ಆರ್, ಹಾಸನದ ಪ್ರತಿನಿಧಿಯಾಗಿದ್ದಾರೆ. ಶಿವಕುಮಾರ್ ಜತೆಗಿನ ವೈಷಮ್ಯದಿಂದ ರಾಜಣ್ಣ ಅವರನ್ನು ಬೆಂಬಲಿಸಬಹುದು ಎಂದು ಮೂಲಗಳು ತಿಳಿಸಿವೆ.
ಸಚಿವರಾದ ಡಿ.ಸುಧಾಕರ್ (ಚಿತ್ರದುರ್ಗ), ಶಿವಾನಂದ ಎಸ್.ಪಾಟೀಲ್ (ವಿಜಯಪುರ), ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ (ಮಂಡ್ಯ), ಮಾಜಿ ಸಚಿವ ಶಿವರಾಮ ಮಹಾಬಲೇಶ್ವರ ಹೆಬ್ಬಾರ್ (ಉತ್ತರ ಕನ್ನಡ), ಈ ಹಿಂದೆ ಅಧ್ಯಕ್ಷರಾಗಿದ್ದ ಬೆಳ್ಳಿ ಪ್ರಕಾಶ್ (ಚಿಕ್ಕಮಗಳೂರು), ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಬಿ.ಜಾರಕಿಹೊಳಿ ರಾಜಣ್ಣಗೆ ಬೆಂಬಲಿಸುವ ಸಾಧ್ಯತೆಯಿದೆ.
ಬಾಗಲಕೋಟೆ ಮತ್ತು ಕೋಲಾರದ ಡಿಸಿಸಿ ಬ್ಯಾಂಕ್‌ಗಳು ಕಾನೂನು ತೊಡಕುಗಳಿಂದ ತಮ್ಮ ನಾಮನಿರ್ದೇಶಿತರನ್ನು ನಿಯೋಜಿಸಲು ಸಾಧ್ಯವಾಗಲಿಲ್ಲ. ಆದರೆ ಮೈಸೂರು ಮತ್ತು ಚಾಮರಾಜನಗರದಲ್ಲಿ ಒಬ್ಬರನ್ನು ನಿಯೋಜಿಸುವ ಸಾಧ್ಯತೆ ಇದೆ.