ಬೆಂಗಳೂರು: ಕರ್ನಾಟಕ ಮೂಲದ ರಿವರ್ ಮೊಬಿಲಿಟಿ ಕಂಪನಿ ತಯಾರಿಸಿರುವ ಯಮಾಹಾ ಇಸಿ-06 ವಿದ್ಯುತ್ ಚಾಲಿತ ಬೈಕ್ ತಯಾರಿಸಿದೆ. ದ್ವಿಚಕ್ರ ವಾಹನ ತಯಾರಿಕೆ ಸ್ಥಳೀಯವಾಗಿಯೇ ತಯಾರಾಗುತ್ತಿರುವುದು, ರಾಜ್ಯ ಕೈಗಾರಿಕಾ ಬೆಳವಣಿಗೆಯಲ್ಲಿನ ಒಂದು ಉಜ್ಜ್ವಲ ಅಧ್ಯಾಯವಾಗಿದೆ. ಇದಕ್ಕೆ ನಮ್ಮ ಸರ್ಕಾರ ಸಹ ಅಗತ್ಯ ಸಹಕಾರ ನೀಡುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು.
ರಿವರ್ ಮೊಬಿಲಿಟಿ ಕಂಪನಿಯ ಬೈಕ್ ತಯಾರಿಕಾ ಘಟಕದಲ್ಲಿರುವ ವ್ಯವಸ್ಥೆಗಳನ್ನು ಮತ್ತಿತರ ಸೌಲಭ್ಯಗಳನ್ನು ವೀಕ್ಷಿಸಿದರು. ಬಳಿಕ ಕೈಗಾರಿಕಾ ಸಹಭಾಗಿತ್ವದ ಅಡಿ 'ಯಮಹಾ ಇಸಿ-06 ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು' ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಯಮಾಹಾ ಕಂಪನಿಗೆ ಹಸ್ತಾಂತರಿಸಿದರು. ಬಳಿಕ ಸ್ಥಳೀಯ ಉತ್ಪಾದನೆ, ಕೈಗಾರಿಕೆ ಬೆಳವಣಿಗೆಯನ್ನು ಕೊಂಡಾಡಿದರು.
ಕರ್ನಾಟಕದಾದ್ಯಂತ ಸಾವಿರಾರು ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಆಟೋಮೊಬೈಲ್ ಮಾರುಕಟ್ಟೆಯು ಇವಿಗಳತ್ತ ತ್ವರಿತ ಬದಲಾವಣೆಯನ್ನು ಕಾಣುತ್ತಿರುವುದರಿಂದ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ (ಇವಿ) ಮೂಲಸೌಕರ್ಯವನ್ನು ಮತ್ತಷ್ಟು ವಿಸ್ತರಿಸಲಿದೆ ಎಂದರು.
ನಗರ ಸಂಚಾರವನ್ನು ಪರಿಸರಸ್ನೇಹಿ, ಸುಗಮ ಮತ್ತು ಸುಸ್ಥಿರಗೊಳಿಸುವಂತಹ ಇಂತಹ ದ್ವಿಚಕ್ರ ವಾಹನ ತಯಾರಿಕೆ ಸ್ಥಳೀಯವಾಗಿಯೇ ಆಗತೊಡಗಿರುವುದು ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಒಂದು ಉಜ್ವಲ ಅಧ್ಯಾಯವಾಗಿದೆ. ಇದು ರಾಜ್ಯವು ಭವಿಷ್ಯದ ಸಂಚಾರ ವ್ಯವಸ್ಥೆಯ ನಿರ್ಮಾಣದ ಸರಿಯಾದ ಪಥದಲ್ಲಿ ಸಾಗುತ್ತಿರುವುದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ’ ಎಂದು ಬಣ್ಣಿಸಿದ್ದಾರೆ. ಇದೇ ವೇಳೆಯಲ್ಲಿ ಅವರು ಕಂಪನಿಯ ತಯಾರಿಕಾ ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ವೀಕ್ಷಿಸಿದರು.
ಈ ಘಟಕವು ವಾರ್ಷಿಕವಾಗಿ ಸುಮಾರು 2,000 ಇವಿ ಬೈಕ್ ಉತ್ಪಾದಿಸುತ್ತದೆ. ಪ್ರತಿ ಸ್ಕೂಟರ್ ಒಂದು ಲಕ್ಷ ಕಿಲೋಮೀಟರ್‌ಗಳವರೆಗೆ ಚಲಿಸುವ ಸಾಮರ್ಥ್ಯವಿರುವ ಸ್ಥಳೀಯವಾಗಿ ತಯಾರಿಸಿದ ಬ್ಯಾಟರಿಗಳನ್ನು ಹೊಂದಿರುತ್ತದೆ. 10 ವರ್ಷಗಳ ವಾರಂಟಿ ಹೊಂದಿರುತ್ತದೆ. ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವುದರಿಂದ ಕೌಶಲ್ಯಪೂರ್ಣ ಉದ್ಯೋಗ ಸೃಷ್ಟಿಸುವ, ಸ್ಥಳೀಯ ಪೂರೈಕೆ ಸರಪಳಿಯನ್ನು ಬಲಪಡಿಸುವ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ತೆರೆಯುವ ಮೂಲಕ ಗಣನೀಯ ಆರ್ಥಿಕ ಮೌಲ್ಯವನ್ನು ಸೃಷ್ಟಿಸುತ್ತದೆ ಎಂದು ಪಾಟೀಲ್ ಹೇಳಿದರು.