ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬಿಎಂ ಮತ್ತಿತರರು ಆರೋಪ ಎದುರಿಸುತ್ತಿರುವ ಮುಡಾ ಭೂಮಿ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ಬಿ-ರಿಪೋರ್ಟ್ (ಮುಗಿದ ವರದಿ) ಕುರಿತ ಆದೇಶವನ್ನು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜನವರಿ 22 ಕ್ಕೆ ಕಾಯ್ದಿರಿಸಿದೆ.
ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ಮತ್ತಿತರರ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಉಲ್ಲೇಖಿಸಿ ಬಿ-ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ದೂರುದಾರರಾದ ಸ್ನೇಹಮಯಿ ಕೃಷ್ಣ ಪ್ರಶ್ನಿಸಿದ್ದರು.
ಮಂಗಳವಾರ ಈ ಪ್ರಕರಣ ವಿಶೇಷ ನ್ಯಾಯಾಲಯದ ಮುಂದೆ ಬಂದಿತು. ಲೋಕಾಯುಕ್ತ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕರಣದ ವಿವರವನ್ನು ಸಲ್ಲಿಸಿದರು.
ತನಿಖಾ ಸಂಸ್ಥೆಯ ಪರವಾಗಿ ವಾದಿಸಿದ ಲೋಕಾಯುಕ್ತ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟೇಶ್ ಅರಬಟ್ಟಿ ಅವರು, ಲೋಕಾಯುಕ್ತ ಪೊಲೀಸರು ಒಟ್ಟು 70 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದ್ದು, ಈ ಪೈಕಿಯಾರೊಬ್ಬರೂ ಕೂಡ ಮುಖ್ಯಮಂತ್ರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಅಥವಾ ತನಿಖೆಯ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಹೇಳಿಕೆ ನೀಡಿಲ್ಲ. ತನಿಖಾಧಿಕಾರಿಗಳು ಎಲ್ಲಾ ಆಯಾಮಗಳಿಂದ ಪರಿಶೀಲಿಸಿ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಕಕ್ಷಿದಾರರಾಗಿ ಹಾಜರಿದ್ದ ಸ್ನೇಹಿಮಯಿ ಕೃಷ್ಣ ಅವರು ನ್ಯಾಯಾಲಯಕ್ಕೆ ಲಿಖಿತ ಅಹವಾಲು ಸಲ್ಲಿಸಿದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ ಜನವರಿ 22ರಂದು ತನ್ನ ಅಂತಿಮ ಆದೇಶವನ್ನು ಪ್ರಕಟಿಸುವುದಾಗಿ ತಿಳಿಸಿತು.