ಬೆಂಗಳೂರು: ಪ್ರತ್ಯೇಕ ಮಾದಕ ದ್ರವ್ಯ ದಂಧೆ ಪ್ರಕರಣಗಳಲ್ಲಿ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿರುವುದಾಗಿ ಬೆಂಗಳೂರಿನ ಸಿಸಿಬಿಯ ಮಾದಕ ದ್ರವ್ಯ ನಿಯಂತ್ರಣ ಘಟಕ ಬುಧವಾರ ತಿಳಿಸಿದೆ.
ಆರೋಪಿಗಳಿಂದ 101 ಗ್ರಾಂ ಕೊಕೇನ್, 481 ಗ್ರಾಂ ಹೈಡ್ರೋ ಗಾಂಜಾ, ಅಪರಾಧಕ್ಕೆ ಬಳಸಲಾದ ಮೊಬೈಲ್ ಫೋನ್‌ಗಳು ಮತ್ತು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ ಸುಮಾರು 1 ಕೋಟಿ ರೂ. ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೊದಲ ಕಾರ್ಯಾಚರಣೆಯಲ್ಲಿ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೆಇಐಎಸ್ ಲೇಔಟ್‌ನಲ್ಲಿ ವ್ಯಕ್ತಿಯೊಬ್ಬರು ಹೈಡ್ರೊ ಗಾಂಜಾ ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಮಾದಕ ದ್ರವ್ಯ ನಿಯಂತ್ರಣ ಘಟಕದ ಅಧಿಕಾರಿಗಳು ದಾಳಿ ನಡೆಸಿದ್ದು, ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ.
ಅಂದಾಜು 48 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ ಹಾಗೂ ಅಪರಾಧಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ವಿದೇಶಿ ಪ್ರಜೆಯೊಬ್ಬರು ಕೊಕೇನ್ ಸರಬರಾಜು ಮಾಡುತ್ತಿದ್ದಾರೆ ಎಂಬ ಸುಳಿವು ಆಧರಿಸಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ ಅಂದಾಜು 50.6 ಲಕ್ಷ ಮೌಲ್ಯದ ಕೊಕೇನ್, ಮೊಬೈಲ್ ಫೋನ್ ಮತ್ತು ಅಪರಾಧಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇಬ್ಬರು ಆರೋಪಿಗಳ ರಾಷ್ಟ್ರೀಯತೆಯನ್ನು ಪೊಲೀಸರು ಬಹಿರಂಗಪಡಿಸಿಲ್ಲ.