ಬೆಂಗಳೂರು: ವಿರೋಧ ಪಕ್ಷಗಳು ಮತ್ತು ವಿವಿಧ ಸರ್ಕಾರೇತರ ಸಂಸ್ಥೆಗಳ ತೀವ್ರ ವಿರೋಧದ ನಂತರ, ರಾಜ್ಯ ಸರ್ಕಾರವು ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಡಿಯಲ್ಲಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳ ನಿರ್ಮಾಣ ಯೋಜನೆಯನ್ನು ಕೈಬಿಟ್ಟಿದೆ.
ಆದಾಗ್ಯೂ, ಸರ್ಕಾರವು ಅಜೀಂ ಪ್ರೇಮ್‌ಜಿ ಫೌಂಡೇಶನ್(ಎಪಿಎಫ್) ಬೆಂಬಲದೊಂದಿಗೆ 1,000 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲು ಬೆಂಗಳೂರು ಉತ್ತರದ ಕ್ಯಾಲಸನಹಳ್ಳಿಯಲ್ಲಿ 10 ಎಕರೆ ಭೂಮಿ ಮಂಜೂರು ಮಾಡಿದೆ.
“ಗ್ರಾಮೀಣ ಪ್ರದೇಶಗಳಿಂದ ಬರುವ ರೋಗಿಗಳ ಅಗತ್ಯಗಳನ್ನು ಪೂರೈಸಲು ಇದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಲಿದೆ. ಒಟ್ಟು 1,000 ಕೋಟಿ ರೂ. ವೆಚ್ಚದ ಈ ಆಸ್ಪತ್ರೆಯ ನಿರ್ಮಾಣ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮತ್ತು ಪ್ರತಿಷ್ಠಾನವು ಪ್ರತಿವರ್ಷ ನಿರ್ವಹಣೆಗಾಗಿ 350 ಕೋಟಿ ರೂ.ಗಳನ್ನು ಖರ್ಚು ಮಾಡುತ್ತದೆ. ಇದನ್ನು 99 ವರ್ಷಗಳ ಗುತ್ತಿಗೆಯಲ್ಲಿ ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ತಿಳಿಸಿದ್ದಾರೆ.
ಅಂಗಾಂಗ ಕಸಿ ಪ್ರಕರಣಗಳ ಹೆಚ್ಚಳ ಮತ್ತು ಚಿಕಿತ್ಸೆಯ ವೆಚ್ಚ ಹೆಚ್ಚುತ್ತಿರುವುದರಿಂದ. ಬಡವರು ಅದನ್ನು ಖರ್ಚು ಭರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಈ ಆಸ್ಪತ್ರೆಯು ಅಂತಹ ದುಬಾರಿ ಆರೋಗ್ಯ ಸೇವೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಅಥವಾ ಉಚಿತವಾಗಿ ಪೂರೈಸುತ್ತದೆ ಎಂದಿದ್ದಾರೆ.
"ಜಯದೇವ ಮತ್ತು ಕಿದ್ವಾಯಿ ಆಸ್ಪತ್ರೆ ಮಾದರಿಯಂತೆಯೇ, ಈ ಆಸ್ಪತ್ರೆಯು ಶೇ 70 ರಷ್ಟು ಸೇವೆಗಳನ್ನು ಉಚಿತವಾಗಿ ಒದಗಿಸುತ್ತದೆ ಮತ್ತು ಉಳಿದ ಶೇ. 30 ರಷ್ಟು ಸೇವೆಗಳನ್ನು ಕನಿಷ್ಠ ಶುಲ್ಕಗಳನ್ನು ಆಧರಿಸಿರುತ್ತದೆ. ಇದರಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಪರಿಹಾರ, ವಿಮಾ ಸೇವೆಗಳ ಮೂಲಕ ಮರುಪಾವತಿ ಸೇರಿವೆ ಎಂದು ಸಚಿವರು ತಿಳಿಸಿದ್ದಾರೆ.
ಇದರಲ್ಲಿ ಸರ್ಕಾರದ ಯಾವುದೇ ಪಾತ್ರವಿರುವುದಿಲ್ಲ ಅಥವಾ ಅದು ಕನಿಷ್ಠ ಪಾತ್ರ ಇರುತ್ತದೆ ಮತ್ತು ಆಸ್ಪತ್ರೆಯನ್ನು ನಡೆಸಲು ಎಪಿಎಫ್‌ಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ. ವೈದ್ಯಕೀಯ ಶಿಕ್ಷಣ ಸಚಿವರು, ಪ್ರಧಾನ ಕಾರ್ಯದರ್ಶಿ ಮತ್ತು ಇಲಾಖೆಯ ನಿರ್ದೇಶಕರು ಮಾತ್ರ ಈ ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರಾಗಿರುತ್ತಾರೆ" ಎಂದು ಅವರು ವಿವರಿಸಿದ್ದಾರೆ.
ಇತ್ತೀಚೆಗೆ, ವಿಜಯಪುರ, ತುಮಕೂರು ಮತ್ತು ಕೋಲಾರದಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ ಇದಕ್ಕೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.