ಬೆಂಗಳೂರು: ಎಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ. ವಿಶೇಷವಾಗಿ ಗವಿಪುರದಲ್ಲಿರುವ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ದೇವಾಲಯ ಇಂದು ವಿಸ್ಮಯಕ್ಕೆ ಸಾಕ್ಷಿಯಾಗಲಿದೆ.
ಗವಿಗಂಗಾಧರ ದೇವಸ್ಥಾನದ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಲಿದ್ದು, ಈ ವಿಶೇಷ ಕೌತುಕಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸೂರ್ಯ ದಕ್ಷಿಣಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ವೇಳೆ ಸೂರ್ಯ ಕಿರಣವು ಶಿವ ಲಿಂಗವನ್ನು ಸ್ಪರ್ಶಿಸಲಿದೆ. ಹೀಗಾಗಿ ಇಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಬೆಳ್ಳಗ್ಗೆ 5 ಗಂಟೆಯಿಂದಲೇ ಗಂಗಾಧರನಿಗೆ ವಿಶೇಷ ಪೂಜೆ ಆರಂಭವಾಗಿದೆ. ಗಂಗಾಧರನಿಗೆ ಪಂಚಾಭೀಷೇಕ, ಪುಷ್ಪಾಭಿಷೇಕ, ಮಹಮಂಗಳಾರತಿ ಮಾಡಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ವಿಶೇಷ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲಿರುವ ಭಕ್ತರು ಕಾತರದಿಂದ ಇದ್ದು, ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರುವ ನಿರೀಕ್ಷೆ ಇದೆ. ಹಬ್ಬದ ಹಿನ್ನೆಲೆ ಮುಂಜಾನೆಯಿಂದಲೇ ದೇಗುಲಕ್ಕೆ ಭಕ್ತಸಾಗರ ಹರಿದುಬರುತ್ತಿದೆ.
ಜನತೆಗೆ ಪ್ರಧಾನಿ ಮೋದಿ ಶುಭಾಶಯ
ಮಕರ ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕನ್ನಡದಲ್ಲೇ ನಾಡಿನ ಜನತೆಗೆ ಶುಭಾಶಗಳನ್ನು ತಿಳಿಸಿದ್ದಾರೆ.
ದೇಶದ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ಈ ಹಬ್ಬವನ್ನು ಭಾರತದಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ತನ್ನೊಂದಿಗೆ ಸಂತೋಷ ಮತ್ತು ಕೃತಜ್ಞತೆಯ ಭಾವವನ್ನು ಹೊತ್ತು ತರುತ್ತದೆ. ಪ್ರಕೃತಿಯೊಂದಿಗೆ ಈ ಹಬ್ಬಕ್ಕಿರುವ ಸಂಬಂಧವೂ ಎಲ್ಲರಿಗೂ ತಿಳಿದಿರುವ ಸಂಗತಿ. ಸಂಕ್ರಾಂತಿಯು ಎಲ್ಲರ ಜೀವನದಲ್ಲಿ ಶಾಂತಿಮತ್ತು ಉತ್ತಮ ಆರೋಗ್ಯವನ್ನು ತರಲಿ. ನಿಮ್ಮೆಲ್ಲಾ ಕನಸಗಳು ನನಸಾಗಲಿ ಎಂದು ಹೇಳಿದ್ದಾರೆ.