ರಾಯಚೂರು: ರಾಯಚೂರಿನ ತಿಂಥಣಿ ಬ್ರಿಡ್ಜ್ ಸಮೀಪದ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಸಿದ್ದರಾಮನಂದ ಸ್ವಾಮೀಜಿ (49ವ) ಅವರು ಹೃದಯಾಘಾತದಿಂದ ಬ್ರಹ್ಮೈಕ್ಯರಾಗಿದ್ದಾರೆ. ನಸುಕಿನ ಜಾವ ಸುಮಾರು 3.40ರ ವೇಳೆಗೆ ಸ್ವಾಮೀಜಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಲಿಂಗಸೂಗೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಹೃದಯಾಘಾತ ಸಂಭವಿಸಿ ಅವರು ನಿಧನರಾದರು.
ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ಬಳಿಯಿರುವ ಕಾಗಿನೆಲೆ ಕನಕ ಗುರುಪೀಠದ ಮೂಲಕ ಸಿದ್ದರಾಮನಂದ ಸ್ವಾಮೀಜಿ ಮೊನ್ನೆ 12, 13 ಮತ್ತು 14ರಂದು ನಡೆದ ಹಾಲುಮತ ಉತ್ಸವ ಕಾರ್ಯಕ್ರಮಗಳನ್ನು ಸ್ವತಃ ನಡೆಸಿಕೊಟ್ಟಿದ್ದರು.
ಕಳೆದ 2023 ಮತ್ತು 2024ರಲ್ಲಿ ಇದೇ ಮಠದ ಉತ್ಸವಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಎಲ್ಲಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
ಸಿದ್ದರಾಮನಂದ ಸ್ವಾಮೀಜಿಗಳ ಅಕಾಲಿಕ ನಿಧನದಿಂದ ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಸ್ವಾಮೀಜಿಗಳ ಅಂತ್ಯಕ್ರಿಯೆಯನ್ನು ತಿಂಥಣಿಯ ಕನಕ ಗುರುಪೀಠದಲ್ಲಿಯೇ ನಡೆಸಲಾಗುವುದು. ಹಾಲುಮತದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಭಕ್ತರು ಮಾಹಿತಿ ನೀಡಿದ್ದಾರೆ.