ಬೆಂಗಳೂರು: ವರ್ಷದ ಮೊದಲ ಸುಗ್ಗಿ ಹಬ್ಬವಾದ 'ಮಕರ ಸಂಕ್ರಾಂತಿ' ಯನ್ನು ನಾಡಿನಲ್ಲಿಡೆ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಯಿತು.
ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಾಯಿಸುವ ವೇಳೆ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿರುವ ಶಿವನ ಮೂರ್ತಿಗೆ ಸೂರ್ಯನ ಕಿರಣಗಳು ಸ್ಪರ್ಶಿಸಿವೆ. ಗರ್ಭ ಗುಡಿಯಲ್ಲಿರುವ ನಂದಿಕೊಂಬಿನ ಮೂಲಕ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಷಿಸಿದ್ದು,ಈ ವಿಸ್ಮಯ ಮತ್ತು ಕೌತುಕವನ್ನು ಕಂಡು ಭಕ್ತರು ಕಣ್ತುಂಬಿಕೊಂಡರು.
ಗವಿಗಂಗಾಧರೇಶ್ವರನಿಗೆ ಸಂಜೆ 5 ಗಂಟೆ 2 ನಿಮಿಷಕ್ಕೆ ಸೂರ್ಯ ರಶ್ಮಿಯ ಸ್ಪರ್ಶವಾಗಬೇಕಿತ್ತು. ಆದರೆ ಸಮಯದಲ್ಲಿ ಬದಲಾವಣೆಯಾಯಿತು. 5 ಗಂಟೆ 17 ನಿಮಿಷದಿಂದ ಶಿವಲಿಂಗಕ್ಕೆ ಭಾಸ್ಕರನ ಸ್ಪರ್ಶವಾಗಲು ಶುರುವಾಯಿತು. ಮೊದಲು ದೇಗುಲದ ಹಂಸ ದ್ವಾರದ ಮೂಲಕ ನಂದಿಯನ್ನ ಸ್ಪರ್ಶಿಸಿದ ಭಾಸ್ಕರ ಬಳಿಕ ನಂದಿಯ ಕೊಂಬಿನ ಮೂಲಕ ಹಾದುಹೋಗಿ ಶಿವಲಿಂಗ ಸ್ಪರ್ಶಿಸಿದ್ದಾನೆ. ಸೂರ್ಯ ರಶ್ಮಿ ಗರ್ಭಗುಡಿ ಪ್ರವೇಶಿಸುತ್ತಲೇ ಗಂಗಾಧರನಿಗೆ ದೀಪಾರಾಧನೆ ಪ್ರಾರಂಭವಾಯಿತು. ಸೂರ್ಯ ರಶ್ಮಿ ಸ್ಪರ್ಶ ವೇಳೆ ಗವಿಗಂಗಾದರೇಶ್ವರನಿಗೆ ಪೂರ್ಣಕುಂಭ ಅಭಿಷೇಕ ಮಾಡಲಾಯಿತು.
ಇನ್ನು ದೇವಸ್ಥಾನದಲ್ಲಿ ಬೆಳಿಗ್ಗೆ 5 ಗಂಟೆಯಿಂದಲೇ ವಿಶೇಷಪೂಜೆ, ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ದೇವಸ್ಥಾನ ತೆರೆದಿತ್ತು. ಆನಂತರ ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಿಲ್ಲ. ಸಂಜೆ ಸೂರ್ಯರಶ್ಮಿ ಲಿಂಗವನ್ನ ಸ್ಪರ್ಶಿಸುವುದರ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಭಕ್ತಾಧಿಗಳು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇವಾಲಯದ ಹೊರಭಾಗದಲ್ಲಿ ಎಲ್ಇಡಿ ವ್ಯವಸ್ಥೆ ಮಾಡಲಾಗಿತ್ತು. 2 ಎಲ್ಇಡಿ ಹಾಗೂ 5 ಟಿವಿಗಳ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಭಕ್ತರಿಗಾಗಿ ಟೆಂಟ್, ಶಾಮಿಯಾನದ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿತ್ತು.
ಒಟ್ಟಾರೆಯಾಗಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿಯ ಚಮತ್ಕಾರವನ್ನು ಕಂಡು ಭಕ್ತರು ಬೆರಗಾದರು. ಭಕ್ತಿ ಭಾವದಲ್ಲಿ ಮಿಂದೆದ್ದರು.