ನಂಜನಗೂಡು: ಭಾರತದ ಅಸ್ತಿತ್ವವಿರುವುದು ಆಧ್ಯಾತ್ಮಿಕತೆಯಲ್ಲಿ, ಆಧ್ಯಾತ್ಮಿಕತೆ ಇಲ್ಲದೆ ಭಾರತವಿಲ್ಲ, ನಮ್ಮ ಸಂಸ್ಕೃತಿ, ಧರ್ಮ, ಆಚಾರ, ವಿಚಾರ, ನಮ್ಮ ದೇವಾಲಯಗಳಲ್ಲಿದೆ, ದೇಶದಲ್ಲಿ ಶಾಂತಿ ನೆಲೆಸಲು ಆಧ್ಯಾತ್ಮಿಕತೆಯಿಂದ ಮಾತ್ರ ಸಾಧ್ಯ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಬೆಳೆಸುವ ದೊಡ್ಡ ಕೆಲಸವನ್ನು ಮಠಮಾನ್ಯಗಳು ನಿರ್ವಹಿಸುತ್ತಿವೆ, ಪುಸ್ತಕದ ಶಿಕ್ಷಣದ ಜೊತೆಗೆ ಜನರಿಗೆ ಮೌಲ್ಯದ ಶಿಕ್ಷಣವನ್ನು ನೀಡುತ್ತಿವೆ, ಆದ್ದರಿಂದ ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯುತ್ತದೆ, ದೇಶದ ಉಳಿವಿನ ಜೊತೆಗೆ ನಮ್ಮ ಆಚಾರ ವಿಚಾರಗಳನ್ನು ಉಳಿಸಿಕೊಳ್ಳಬೇಕಿದೆ, ನಮ್ಮ ಮುಂಬರುವ ಪೀಳಿಗೆಗೂ ಸಹ ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ತಿಳಿಸುವ ಕೆಲಸ ಮಾಡಬೇಕಿದೆ ಎಂದರು.
ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ರಾಜ್ಯಮಟ್ಟದ ಭಜನಾಮೇಳ ಮತ್ತು ದೇಶಿ ಆಟಗಳು ಸೋಬಾನೆ ಪದ ರಂಗೋಲಿ ಸ್ಪರ್ಧೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಬುದ್ಧಿಯನ್ನು ಕೊಂಡೊಯ್ಯುವ ಯಾತ್ರೆ
ಸುತ್ತೂರು ಜಾತ್ರೆಗೆ ಬರುವುದೇ ಖುಷಿಯ ಸಂಗತಿ ಮತ್ತು ಹೆಮ್ಮೆಯಾಗಿದೆ. ಸುತ್ತೂರು ಜಾತ್ರೆ ಖರೀದಿಯ ಜೊತೆಗೆ ಬುದ್ದಿಯನ್ನು ಕೊಂಡೊಯ್ಯುವ ಯಾತ್ರೆಯಾಗಿದೆ, ಶ್ರೀ ಮಠವು ಧಾರ್ಮಿಕ ಕೈಂಕರ್ಯದ ಜೊತೆಗೆ ಈ ಭಾಗದ ಗ್ರಾಮೀಣ ಭಾಗದ ಜನರಿಗೆ ಅವಶ್ಯವಿರುವ ಜ್ಞಾನವನ್ನು ಹಂಚುವ ಕೆಲಸವನ್ನು ಮಠವು ನಡೆಸುತ್ತಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸುತ್ತೂರು ಮಠವು ಶಿಕ್ಷಣ ದಾಸೋಹ ಆಧ್ಯಾತ್ಮಿಕತೆಯನ್ನು ಮೀರಿ ದೇಶಕ್ಕೆ ಅನ್ನ ಕೊಡುವ ರೈತರಿಗೆ ನೀರು ಒದಗಿಸುವ ಕೆಲಸವನ್ನು ಮಾಡಿದೆ, ಶ್ರೀಗಳ ದೂರ ದೃಷ್ಟಿಯ ಫಲವಾಗಿ ನಾನು ನೀರಾವರಿ ಸಚಿವನಾಗಿದ್ದ ವೇಳೆ ಸುತ್ತೂರು ಶ್ರೀಗಳ ಸಲಹೆಯಂತೆ ಚಾಮರಾಜನಗರ ಭಾಗದ ಕೆರೆಗಳನ್ನು ತುಂಬಿಸುವ ಕೆಲಸವನ್ನು ಮಾಡಿದ್ದೇನೆ.
ಅಭಿವೃದ್ಧಿ ಮತ್ತು ಪರಂಪರೆ ಒಂದೇ ಸ್ಥಳದಲ್ಲಿರುವುದು ಸುತ್ತೂರು ಮಠದಲ್ಲಿ ಮಾತ್ರ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ವರ್ಷದಿಂದ ವರ್ಷಕ್ಕೆ ಪರಂಪರೆಯನ್ನು ಶ್ರೀಮಂತಗೊಳಿಸುವ ಕೆಲಸವನ್ನು ಸ್ವಾಮೀಜಿಗಳು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೇವೆಗೆ ಸುತ್ತೂರು ಮಠ ನಿದರ್ಶನ
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಒಂದು ಮಠ ಯಾವ ಆಯಾಮಗಳಲ್ಲಿ ಸೇವೆ ಸಲ್ಲಿಸಬಹುದು, ಎಂಬುದಕ್ಕೆ ಸುತ್ತೂರು ಮಠ ನಿದರ್ಶನವಾಗಿದೆ, ಸುತ್ತಮುತ್ತಲ ರೈತರಿಗೆ ಅನುಕೂಲವಾಗುವಂತೆ ಕೆರೆಕಟ್ಟೆಗಳನ್ನು ತುಂಬಿಸಿದ ಕೀರ್ತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗೆ ಸಲ್ಲುತ್ತದೆ ಎಂದರು.