ಬೆಂಗಳೂರಿನ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಡ್ರಗ್ಸ್ ಮುಕ್ತಮಾಡಲು ವ್ಯಸನಿ ವಿಚಾರಣೆ ಮಾಡಿದರೆ ಮೂಲ ಮಾಹಿತಿ ಸಿಗುತ್ತದೆ. ಮಹಾರಾಷ್ಟ್ರದ ಪೊಲೀಸರು ಬಂದು ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಮಾಡಿದ್ದಾರೆ. ಅದನ್ನು ಕರ್ನಾಟಕ ಪೊಲೀಸರು ಏಕೆ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಪೆಡ್ಲರ್ ವಿಚಾರಣೆ ಮಾಡಿದರೆ ಎಲ್ಲಿಂದ ಡ್ರಗ್ಸ್ ಬಂತು ಅಂತಾ ಗೊತ್ತಾಗುತ್ತೆ. ಅಪರಾಧದಲ್ಲಿ ಭಾಗಿಯಾದ ವಿದೇಶಿಯರನ್ನು ಅವರ ದೇಶಕ್ಕೆ ವಾಪಸ್ ಕಳಿಸುವ ಕೆಲಸ ಮಾಡುತ್ತೇವೆ. ಪಿಐ, ಪಿಎಸ್ಐ ಸೇರಿ ಎಲ್ಲರ ಮೇಲೂ ಹಿರಿಯ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ನಡುವಿನ ಒಡಂಬಡಿಕೆಗೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ಸಹಿ ಹಾಕಲಾಗಿದೆ. ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾವಿರ ಆಸ್ಪತ್ರೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಐದು ವರ್ಷಗಳಲ್ಲಿ 4,000 ಕೋಟಿ ರೂ. ವೆಚ್ಚ ಮಾಡುವ ಗುರಿ ಹೊಂದಿದೆ. ಇದಕ್ಕಾಗಿ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ಆವರಣದಲ್ಲಿ ಸರ್ಕಾರ 10 ಎಕರೆ ಸ್ಥಳವನ್ನು 99 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಒಪ್ಪಂದವಾಗಿದೆ ಎಂದು ತಿಳಿಸಿದರು.
ಬೆಂಗಳೂರು ಮೆಟ್ರೋ ಇಂದು ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಆಗಿದೆ. ಇದರ ಪರಿಣಾಮವಾಗಿ ಸಾಮಾನ್ಯ ಜನರು ಮೆಟ್ರೋ ಬಳಸಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿ, ಇದೀಗ ಮತ್ತೆ ಮುಂಬರುವ ಫೆಬ್ರವರಿಯಲ್ಲಿ ಬಿ.ಎಂ. ಆರ್.ಸಿ.ಎಲ್ 5% ದರ ಏರಿಕೆಗೆ ಮುಂದಾಗಿರುವುದು ಅಕ್ಷಮ್ಯ. ರಾಜ್ಯ ಸರ್ಕಾರ ಹಾಗೂ ಬಿ.ಎಂ. ಆರ್.ಸಿ.ಎಲ್ ಜನರನ್ನು ಸುಲಿಗೆ ಮಾಡುವ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ & ರಾಜ್ಯ ಸರ್ಕಾರಗಳ ನಡುವಿನ ರಾಜಕೀಯ, ಆರೋಪ, ಪ್ರತ್ಯಾರೋಪಗಳನ್ನು ಬದಿಗಿಟ್ಟು ನಮ್ಮ ಬೆಂಗಳೂರಿನ ನಾಗರಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯತೆ ಇದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಜ.1 ರಂದು ಬಳ್ಳಾರಿಯಲ್ಲಿನ ಶಾಸಕ ಜನಾರ್ಧನರೆಡ್ಡಿ ಮನೆ ಬಳಿ ನಡೆದ ಫೈರಿಂಗ್ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಶಾಸಕ ಭರತ್ ರೆಡ್ಡಿ ಮತ್ತವರ ಆಪ್ತ ಸತೀಶ್ ರೆಡ್ಡಿ ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಬಳ್ಳಾರಿಯಲ್ಲಿಂದು ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸುವ ಮೂಲಕ ಬಲ ಪ್ರದರ್ಶನ ನಡೆಸಿತು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಗೃಹ ಇಲಾಖೆ ಸಚಿವರು ಕೇವಲ ವಿಧಾನ ಸಭೆಯಲ್ಲಿ ಉತ್ತರ ನೀಡಲು ಮಾತ್ರ ಇದ್ದಾರೆ. ಅವರಿಂದ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಗುಂಡು ಹಾರಿಸಿದ್ದು ಕಾಂಗ್ರೆಸ್ ನವರೆಂದು ಅವರ ಕಡೆಯವರ ಬಂಧನ ಇಲ್ಲ. ಅದೇನಾದ್ರೂ ಬಿಜೆಪಿಯವರ ಕಡೆಯಿಂದ ಆಗಿದ್ದರೆ ಈ ವೇಳೆಗೆ ನೂರಾರು ಜನರ ಬಂಧನವಾಗುತ್ತಿತ್ತು. ಬಳ್ಳಾರಿಯನ್ನೇ ಸುಡುತ್ತೇನೆ ಎಂದ ಶಾಸಕನಿಗೆ ಡಿಸಿಎಂ ಡಿಕೆಶಿ ಪೂರ್ತಿ ಬೆಂಬಲ ಎನ್ನುತ್ತಾರೆ. ಇಂತಹವರಿಗೆ ಸರಿಯಾದ ಬುದ್ದಿ ಕಲಿಸಿ ಎಂದು ಕರೆ ನೀಡಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ, ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆಯವರ ತಂದೆ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ಬೀದರ್ನಲ್ಲಿ ನಿಧನರಾದರು. ಅವರಿಗೆ 102 ವರ್ಷ ವಯಸ್ಸಾಗಿತ್ತು.ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ಅವರ ಪುತ್ರರಾಗಿರುವ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಭೀಮಣ್ಣ ಖಂಡ್ರೆ ನಿಧನಕ್ಕೆ ಸಿಎಂ, ಡಿಸಿಎಂ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅಕ್ರಮ ವಲಸಿಗರ ಶೆಡ್ಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಪುನೀತ್ ಕೆರೆಹಳ್ಳಿ ಹಾಗೂ ಸಹಚರರು ಸೇರಿ ಬೆಂಗಳೂರಿನಲ್ಲಿರುವ ಅಕ್ರಮ ವಲಸಿಗರ ಶೆಡ್ಗಳಿಗೆ ಹೋಗಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಶೆಡ್ ವಾಸಿಗಳ ಬಳಿ ರಾಷ್ಟ್ರೀಯತೆ ಬಗ್ಗೆ ಪ್ರಶ್ನೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಂಡು ಸರ್ಕಾರಕ್ಕೆ ನಾನಾ ಪ್ರಶ್ನೆಗಳನ್ನು ಕೇಳಿದ್ದರು.