ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ದಂಪತಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಕಾಡುಗೋಡಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರ ನಿವಾಸಿ ಸೈಯದ್ ಅರ್ಬಾಜ್ ಖಾನ್ (25) ಬಂಧಿತ ಆರೋಪಿ. ಶುಕ್ರವಾರ ಸಂಜೆ ದಂಪತಿ ಕಾರಿನಲ್ಲಿ ಹೋಗುವಾಗ ಓವರ್ ಟೇಕ್ ವಿಚಾರಕ್ಕೆ ಆರೋಪಿ ಜಗಳ ಮಾಡಿದ್ದಾನೆ. ನಂತರ ಅಪಾರ್ಟ್‌ಮೆಂಟ್‌ವೊಂದರ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದ್ದಾಗ ಬೈಕ್ ನಿಲ್ಲಿಸಿ ಬಂದ ಆರೋಪಿ ನಡು ರಸ್ತೆಯಲ್ಲಿಯೇ ದಂಪತಿ ಜತೆ ಗಲಾಟೆ ಮಾಡಿದ್ದ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು,ಅದು ವಿಕೋಪಕ್ಕೆ ಹೋದಾಗ ಮಾರಕಾಸ್ತ್ರವನ್ನು ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮನ್ನು ಇಲ್ಲಿಯೇ ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ.
ಬೈಕ್ ಸವಾರನ ಹುಚ್ಚಾಟ ಕಾರಿನಲ್ಲಿದ್ದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬೈಕ್ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಸೈಯದ್ ಅರ್ಬಾಜ್ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಡಕಾಯಿತಿಗೆ ಸಂಚು, ಫ್ರೇಜರ್‌ಟೌನ್ ಮತ್ತು ಸಂಪಂಗಿ ರಾಮನಗರ ಠಾಣೆಗಳಲ್ಲಿ ಹಲ್ಲೆ ಹಾಗೂ ಅಶೋಕನಗರ ಠಾಣೆಯಲ್ಲಿ ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ.