ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಘಟನೆ ಭಾನುವಾರ ನಡೆದಿದ್ದು, ಈ ವೇಳೆ ವಾಹನಕ್ಕೆ ದಾರಿ ಮಾಡಿಕೊಡುವ ಪ್ರಯತ್ನದಲ್ಲಿ ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಬೈಕ್ ಸವಾರನಿಗೆ ಒದೆಯಲು ಮುಂದಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಧ್ಯಾಹ್ನ 1.30ರ ಸುಮಾರಿಗೆ ಸಿದ್ದರಾಮಯ್ಯ ಅವರು ಜಾತ್ರೆಯಲ್ಲಿನ ಕೃಷಿ ವಿಚಾರಸಂಕಿರಣವನ್ನು ಉದ್ಘಾಟಿಸಿ, ಸ್ನೇಹಿತ ನರಸೇಗೌಡ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ತರಾತುರಿಯಲ್ಲಿ ಕಾರ್ಯಕ್ರಮದಿಂದ ನಿರ್ಗಮಿಸಿದರು.
ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಕಿಲೋಮೀಟರ್‌ಗಳವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಇಕ್ಕಟ್ಟಾದ ರಸ್ತೆಗಳಲ್ಲಿ ಮುಖ್ಯಮಂತ್ರಿಗಳ ವಾಹನಕ್ಕೆ ಜಾಗ ಮಾಡಿಕೊಡಲು ಪೊಲೀಸರು ಹರಸಾಹಸ ಪಡುತ್ತಿದ್ದರು.
ಬಳಿಕ ಖುದ್ದು ಬಾಲದಂಡಿ ಅವರೇ ರಸ್ತೆಗೆ ಇಳಿದಿದ್ದರು. ಮುಖ್ಯಮಂತ್ರಿಯವರ ವಾಹನಕ್ಕೆ ದಾರಿ ಮಾಡಿಕೊಟ್ಟ ನಂತರವೂ ವಾಹನಗಳ ಸಂಚಾರ ನಿಯಂತ್ರಿಸುತ್ತಿದ್ದರು.
ಈ ವೇಳೆ ಬಸ್‌ಗೆ ಅಡ್ಡಲಾಗಿ ಬೈಕ್ ಓಡಿಸಲು ಸವಾರ ಮುಂದಾಗಿದ್ದರಿಂದ ಸಿಟ್ಟಿಗೆದ್ದ ಅವರು, ಅವರತ್ತ ಕಾಲೆತ್ತಿದರು. ಇದನ್ನು ಸಾರ್ವಜನಿಕರು ವಿಡಿಯೊ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.