ಹಾಸನ: ಹಾಸನ ಜಿಲ್ಲೆಯಲ್ಲಿ ಪುಂಡಪೋಕರಿಗಳ ಹಾವಳಿ ಮತ್ತೆ ಹೆಚ್ಚಾಗಿದೆ, ಶಾಲೆಯಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪರಿಚಿತ ವ್ಯಕ್ತಿಯೊಬ್ಬ ಹಿಂಬಾಲಿಸಿ ಕಿರುಕುಳ ನೀಡಿರುವ ಆತಂಕಕಾರಿ ಘಟನೆ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ, ಸಂಜೆ ಶಾಲಾ ವಾಹನದಲ್ಲಿ ಮನೆಗೆ ಮರಳಿದ್ದಾಳೆ. ವಾಹನದಿಂದ ಇಳಿದು ಬಾಲಕಿ ತನ್ನ ಮನೆಯತ್ತ ನಡೆದು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಹಿಂಬಾಲಿಸಿದ್ದಾನೆ.
ಇದನ್ನು ಗಮನಿಸಿರುವ ಬಾಲಕಿ ವೇಗವಾಗಿ ಬಂದು ಮನೆಯ ಗೇಟ್ ತಲುಪಿದ್ದಾಳೆ. ಈ ನಡುವೆ ಬಾಲಕಿಯ ಮನೆಯವರೆಗೂ ಬಂದಿರುವ ಆಗಂತುಕ ಗೇಟ್ ಬಳಿ ಬಂದಿದ್ದಾನೆ. ಇದರಿಂದ ಗಾಬರಿಗೊಂಡ ಬಾಲಕಿ ಬಾಗಿಲು ತೆಗೆಯುವಂತೆ ಜೋರಾಗಿ ಕೂಗಿದ್ದಾಳೆ. ಆದರೂ ಹೆದರದ ವ್ಯಕ್ತಿ, ಗೇಟ್ ಬಳಿಯೇ ನಿಂತು ವಿಕೃತಿ ಮೆರೆದಿದ್ದಾನೆ.
ಯುವಕನ ವರ್ತನೆಯಿಂದ ಆತಂಕಗೊಂಡರೂ ಧೈರ್ಯ ಕಳೆದುಕೊಳ್ಳದ ಬಾಲಕಿ, ಮನೆಯ ಗೇಟ್ ಬಳಿಯೇ ನಿಂತು ಅವನನ್ನು ಪ್ರತಿರೋಧಿಸಿದ್ದಾಳೆ.
ಬಾಲಕಿಯ ಕಿರುಚಾಟ ಮತ್ತು ಪ್ರತಿರೋಧವನ್ನು ಕಂಡು ಸಾರ್ವಜನಿಕರು ಜಮಾಯಿಸುವ ಭೀತಿಯಿಂದ ಪುಂಡ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಈ ಇಡೀ ಘಟನೆಯ ದೃಶ್ಯಾವಳಿಗಳು ಮನೆಯ ಮುಂಭಾಗ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಯುವಕ ಬಾಲಕಿಯನ್ನು ಹಿಂಬಾಲಿಸಿಕೊಂಡು ಬರುವುದು ಮತ್ತು ಗೇಟ್ ಬಳಿ ನಿಂತು ವರ್ತಿಸುವ ದೃಶ್ಯಗಳು ವಿಡಿಯೋದಲ್ಲಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.