ಬೆಂಗಳೂರು: ಗುಜರಾತ್ ರಾಜ್ಯದ ವಾಹನಗಳಿಗೆ ಕಾನೂನುಬಾಹಿರವಾಗಿ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಕರ್ತವ್ಯ ಲೋಪವೆಸಗಿದ್ದಕ್ಕಾಗಿ ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅವರನ್ನು ಅಮಾನತುಗೊಳಿಸಲಾಗಿದೆ. ಸಾರಿಗೆ ಇಲಾಖೆ ಆಯುಕ್ತರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಗುಜರಾತ್ ರಾಜ್ಯ ಸಾರಿಗೆ ಕಚೇರಿಯ ಇ-ಡಿಟೆಕ್ಷನ್ ತಂಡವು ವೆಹಿಕಲ್ ಇ-ಡಿಟೆಕ್ಷನ್ ಪೋರ್ಟಲ್‌ನಲ್ಲಿನ ಡೇಟಾವನ್ನು ಪರಿಶೀಲಿಸಿದಾಗ 41 ವಾಹನಗಳು ಅಕ್ರಮದಲ್ಲಿ ತೊಡಗಿಕೊಂಡಿರುವುದು ಪತ್ತೆಯಾಗಿದೆ. ಈ ವಾಹನಗಳಿಗೆ ಕರ್ನಾಟಕದ ಆರ್‌ಟಿಒ ಕಚೇರಿಗಳಲ್ಲಿ ತಪಾಸಣೆ ಮಾಡಿರುವುದು ಮತ್ತು ಫಿಟ್‌ನೆಸ್ ಪ್ರಮಾಣಪತ್ರ ಪಡೆದಿರುವುದು ತಿಳಿದುಬಂದಿದೆ. ಆದರೆ, ಅದೇ ದಿನ ಆ ವಾಹನಗಳು ಗುಜರಾತ್‌ನ ಟೋಲ್ ಪ್ಲಾಜಾಗಳ ಮೂಲಕ ಹಾದುಹೋಗಿರುವುದು ಕಂಡುಬಂದಿದೆ.
ಸಾರಿಗೆ ಆಯುಕ್ತರ ಕಚೇರಿಯ ಉಪನಿರ್ದೇಶಕ ನಿಸಾರ್ ಅಹಮದ್ ಅವರು ಈ ವಾಹನಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಷಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ಬಂದ ಕೂಡಲೇ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ ಬೆಂಗಳೂರು ನಗರ ವಿಭಾಗದ ಜಂಟಿ ಸಾರಿಗೆ ಆಯುಕ್ತರಿಗೆ ವಿಸ್ತೃತ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.
ಬೆಂಗಳೂರಿನ (ಕೇಂದ್ರ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅವರು ನಮೂನೆ-38(ಎ) ರಲ್ಲಿ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನವೀಕರಿಸಿದ್ದಾರೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ. ಆದರೆ, ತಪಾಸಣೆ ನಡೆಸಿದ ಅದೇ ದಿನ ಎಲ್ಲ 41 ವಾಹನಗಳು ಗುಜರಾತ್‌ನ ಟೋಲ್ ಪ್ಲಾಜಾಗಳ ಮೂಲಕ ಹಾದು ಹೋಗಿವೆ ಎಂದು ಸಾರಿಗೆ ಇಲಾಖೆ 4.0 ಸಾಫ್ಟ್‌ವೇರ್ ದೃಢಪಡಿಸಿದೆ.
ವಾಹನಗಳ ಭೌತಿಕ ತಪಾಸಣೆ ನಡೆಸದೆಯೇ ನಮೂನೆ-38(ಎ)ಯನ್ನು ಅಕ್ರಮವಾಗಿ ಅನುಮೋದಿಸಲಾಗಿದ್ದು, ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿರುವುದು ಮತ್ತು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನಿಸಾರ್ ಅಹಮದ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.