ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನದಲ್ಲಿಂದು ದೊಡ್ಡ ಹೈಡ್ರಾಮಾ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸರ್ಕಾರ ಸಿದ್ದಪಡಿಸಿದ ಭಾಷಣ ಓದದೆ ತಾವೇ ಸಿದ್ಧಪಡಿಸಿದ ಭಾಷಣ ಓದಿ, ಹೊರ ನಡೆದರು. ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಸದಸ್ಯರ ಆಕ್ರೋಶ, ಘೋಷಣೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರ ಘೋಷಣೆ ಎಲ್ಲದಕ್ಕೂ ಸದನ ಸಾಕ್ಷಿಯಾಯಿತು. ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳಿವೆ. ಅದನ್ನು ಸರಿಪಡಿಸುವಂತೆ ಇಲ್ಲದಿದ್ದರೆ ಅಧಿವೇಶನಕ್ಕೆ ಬರುವುದಿಲ್ಲ, ಭಾಷಣ ಮಾಡುವುದಿಲ್ಲ ಎಂದು ರಾಜ್ಯಪಾಲರು ಸರ್ಕಾರಕ್ಕೆ ಬುಧವಾರ ತಿಳಿಸಿದ್ದರು. ಆದರೆ ಸರ್ಕಾರ ಯಾವುದೇ ಬದಲಾವಣೆ ಮಾಡದಿದ್ದರಿಂದ ರಾಜ್ಯಪಾಲರು ತಾವೇ ಸಿದ್ಧಪಡಿಸಿದ್ದ ಭಾಷಣವನ್ನು ಓದಿ ಎರಡೇ ನಿಮಿಷದಲ್ಲಿ ಸದನದಿಂದ ಹೊರನಡೆದರು. ಈ ವೇಳೆ ಕೆಲ ಸದಸ್ಯರುಗಳು ರಾಜ್ಯಪಾಲರನ್ನು ಹಿಂಬಾಲಿಸಿ ಭಾಷಣ ಓದುವಂತೆ ಒತ್ತಾಯಿಸಿದರು. ಈ ಹಂತದಲ್ಲಿ ಸದನದಲ್ಲೇ ರಾಜ್ಯಪಾಲರನ್ನು ಅಡ್ಡ ಹಾಕಿದ ಕಾಂಗ್ರೆಸ್‌ನ ವಿಧಾನಪರಿಷತ್‌ನ ಸದಸ್ಯರಾದ ಹರಿಪ್ರಸಾದ್, ಬಾಲಕೃಷ್ಣ ಭಾಷಣ ಓದಿ ಎಂದು ರಾಜ್ಯಪಾಲರಿಗೆ ನೇರವಾಗಿ ಆಗ್ರಹಿಸಿದರು. ಆಗ ರಾಜ್ಯಪಾಲರ ಅಡ್ಡಗಟ್ಟಿದ ಸದಸ್ಯರನ್ನು ಬದಿಗೆ ಸರಿಸಿ ರಾಜ್ಯಪಾಲರು ಹೊರಗೆ ಹೋಗಲು ಮಾರ್ಷಲ್‌ಗಳು ಅನುವು ಮಾಡಿಕೊಟ್ಟರು.
ರಾಜ್ಯಪಾಲರು ಸರ್ಕಾರದ ಭಾಷಣವನ್ನಲ್ಲ, ತಮ್ಮದೇ ಭಾಷಣದ ಒಂದು ವಾಕ್ಯವನ್ನು ಓದಿದರು. ಇದು ಪ್ರತಿನಿಧಿ ಸಭೆಗೆ ಮಾಡಿದ ಅವಮಾನ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. ರಾಜ್ಯಪಾಲರು ತಾವೇ ಸಿದ್ಧಪಡಿಸಿದ ಭಾಷಣವನ್ನು ಓದಿದ್ದಾರೆ. ಇದು ಭಾರತೀಯ ಸಂವಿಧಾನದ 176 ಮತ್ತು 163ನೇ ವಿಧಿಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ರಾಜ್ಯಪಾಲರ ಈ ವರ್ತನೆಯ ವಿರುದ್ಧ ನಾವು ಪ್ರತಿಭಟಿಸುತ್ತೇವೆ, ಅವರ ನಡವಳಿಕೆಯ ಕುರಿತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕೆ ಎಂದು ಸರ್ಕಾರ ಪರಿಶೀಲಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಮತ್ತೊಂಡೆದೆ ಸದನದಿಂದ ಹೊರಹೋಗುತ್ತಿದ್ದ ರಾಜ್ಯಪಾಲರನ್ನು ಬಿಕೆ ಹರಿಪ್ರಸಾದ್ ಮತ್ತು ಇತರ ಶಾಸಕರು ಅಡ್ಡಿಗಟ್ಟಿರುವುದು ಖಂಡನೀಯ. ಕಾಂಗ್ರೆಸ್ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಈ ಕುರಿತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಗೆ ದೂರು ಸಲ್ಲಿಸಿದ್ದಾರೆ.
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ ಸಂಬಂಧ ಎಫ್ಐಆರ್ ರದ್ದು ಕೋರಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನೊಳಗೊಂಡ ನ್ಯಾಯಪೀಠ ವಾದ ಆಲಿಸಿತು. ಫೋನ್ ಮೂಲಕ ಆಡಿದ ಮಾತಿಗೆ ಮಾಧ್ಯಮದಲ್ಲೇ ರಾಜೀವ್ ಗೌಡ ಕ್ಷಮೆ ಕೇಳಿದ್ದಾರೆ. ಬಿಎನ್‌ಎಸ್ ಸೆಕ್ಷನ್ 132 ಈ ಕೇಸಿನಲ್ಲಿ ಅನ್ವಯಿಸುವುದಿಲ್ಲ. ಇನ್ನು ತನಿಖೆಗೆ ಸಹಕರಿಸಲು ರಾಜೀವ್ ಗೌಡ ಸಿದ್ಧರಿದ್ದಾರೆ ಎಂದು ವಕೀಲರು ವಾದಿಸಿದ್ದರು. ಈ ವೇಳೆ ಗರಂ ಆದ ನ್ಯಾಯಾಮೂರ್ತಿಗಳು ಅರ್ಜಿದಾರನಿಗೆ ಮಹಿಳೆಯರೆಂದರೆ ಗೌರವ ಇಲ್ಲವೇ ಎಂದು ಪ್ರಶ್ನಿಸಿದ್ದು ಕೇಸ್ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದರು.
ಭದ್ರತಾ ತಪಾಸಣೆಯ ನೆಪದಲ್ಲಿ ವಿದೇಶಿ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕೊರಿಯಾಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಏರ್ ಇಂಡಿಯಾ ಎಸ್‌ಎಟಿಎಸ್‌ನ ಉದ್ಯೋಗಿ ಮೊಹಮ್ಮದ್ ಅಫ್ಫಾನ್ ಅಹಮದ್ ಲೈಂಗಿಕ ಕಿರುಕುಳ ನೀಡಿದ್ದಾನೆ. ತಪಾಸಣೆಯ ನೆಪದಲ್ಲಿ ಪುರುಷರ ಶೌಚಾಲಯಕ್ಕೆ ಕರೆದೊಯ್ದು ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಹಿಳೆ ದೂರು ನೀಡಿದ್ದರು. ಕೂಡಲೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಕೆಐಎ ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರಿಸಿದರು. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಬಳ್ಳಾರಿ ಹಿಂಸಾಚಾರವನ್ನು ಖಂಡಿಸಿ ಜನವರಿ 17ರಂದು ನಡೆದ ಬೃಹತ್ ಪ್ರತಿಭಟನಾ rally ವೇಳೆ ಅತ್ಯಾಚಾರ ಸಂತ್ರಸ್ತೆಯ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಮಾಜಿ ಸಚಿವ, ಬಿಜೆಪಿ ನಾಯಕ ಬಿ. ಶ್ರೀರಾಮುಲು ವಿಷಾದ ವ್ಯಕ್ತಪಡಿಸಿ, ಕ್ಷಮೆಯಾಚಿಸಿದ್ದಾರೆ. ಬಳ್ಳಾರಿಯಲ್ಲಿ ಅಕ್ರಮಗಳು, ದಂಧೆಗಳು, ಗಾಂಜಾ, ಡ್ರಗ್ಸ್ ಮಾರಾಟ ಎಗ್ಗಿಲ್ಲದೇ ನಡೆದಿವೆ. ಈ ಬಗ್ಗೆ ಸಮಾವೇಶದಲ್ಲಿ ಮಾತನಾಡುವಾಗ ಅನಿವಾರ್ಯವಾಗಿ ಅತ್ಯಾಚಾರ ಸಂತ್ರಸ್ತೆ ಕುರಿತು ಮಾತನಾಡಬೇಕಾಯಿತು. ಇದರಿಂದ ಬಾಲಕಿಗೆ, ಆಕೆಯ ತಂದೆ ತಾಯಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನ್ಯಾಯ ಒದಗಿಸಿಕೊಡುವಲ್ಲಿ ನಾನು ಆ ಕುಟುಂಬದ ಜೊತೆ ನಿಲ್ಲುತ್ತೇನೆ. ಸಂತ್ರಸ್ತೆಯೂ ನನ್ನ ಮಗಳಂತೆ. ಈ ವಿಷಯದಲ್ಲಿ ಕಾನೂನು ಕ್ರಮಗಳನ್ನು ಎದುರಿಸುತ್ತೇನೆ ಎಂದರು.