ಬೆಂಗಳೂರು: ಜೂನಿಯರ್ ವಿದ್ಯಾರ್ಥಿಗಳನ್ನು ರ‍್ಯಾಗ್ ಮಾಡಿದ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 22 ಕಾಲೇಜು ವಿದ್ಯಾರ್ಥಿಗಳು ಮತ್ತು ಹೊರಗಿನ ವ್ಯಕ್ತಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಅವರು ತಲೆಮರೆಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ದೇವನಹಳ್ಳಿಯ ಆಕಾಶ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಪ್ರವೇಶ ವಿಭಾಗದ ಮುಖ್ಯಸ್ಥ ಮಿಧುನ್ ಮಾಧವನ್ ಅವರು ನೀಡಿದ ದೂರಿನ ಆಧಾರದ ಮೇಲೆ ಜನವರಿ 16 ರಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ, ಆರೋಪಿಗಳು ಜನವರಿ 14 ರಂದು ಕ್ಯಾಂಪಸ್‌ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ರ‍್ಯಾಗ್ ಮಾಡಿ, ಸಿಗರೇಟ್ ಮತ್ತು ಪಾನೀಯಗಳನ್ನು ತರುವುದು ಮತ್ತು ಅವರ ಪುಸ್ತಕಗಳನ್ನು ಕೊಂಡೊಯ್ಯುವುದು ಸೇರಿದಂತೆ ಇತರ ಆದೇಶಗಳನ್ನು ಪಾಲಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜೂನಿಯರ್‌ಗಳು ಮಾಧವನ್ ಅವರನ್ನು ಸಂಪರ್ಕಿಸಿದಾಗ, ಅವರು ಹಿರಿಯ ವಿದ್ಯಾರ್ಥಿಗಳಿಗೆ ಇಂತಹ ಕೃತ್ಯಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಹಿರಿಯ ವಿದ್ಯಾರ್ಥಿಗಳು ಜನವರಿ 15 ರಂದು ಮತ್ತೆ ರ‍್ಯಾಗಿಂಗ್ ಪುನರಾರಂಭಿಸಿದ್ದಾರೆ. ಆಗ ಜೂನಿಯರ್‌ಗಳು ಮತ್ತೊಮ್ಮೆ ಮಾಧವನ್ ಅವರ ಗಮನಕ್ಕೆ ಇದನ್ನು ತಂದಿದ್ದಾರೆ.
ನಂತರ ಮಾಧವನ್, ಜೂನಿಯರ್‌ಗಳೊಂದಿಗೆ ಕಾಲೇಜಿನ ಹಿಂದಿನ ಚಹಾ ಅಂಗಡಿಯ ಬಳಿ ತೆರಳಿ ಹಿರಿಯ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಹಿರಿಯ ವಿದ್ಯಾರ್ಥಿಗಳು ಮಾಧವನ್ ಮತ್ತು ಜೂನಿಯರ್‌ಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಿರಿಯ ವಿದ್ಯಾರ್ಥಿಗಳ ಜೊತೆಗಿದ್ದ ಹೊರಗಿನವನಾದ ನವೀನ್ ಎಂಬಾತ ರಾಡ್, ದೊಣ್ಣೆ ಮತ್ತು ಕಲ್ಲುಗಳನ್ನು ಬಳಸಿ ಅವರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಕರ್ನಾಟಕ ಶಿಕ್ಷಣ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.