ಬೆಂಗಳೂರು: ನಗರದ ಹೊರವಲಯದಲ್ಲಿ ದುಷ್ಕರ್ಮಿಗಳ ಗುಂಪೊಂದು ಅಪಹರಣಕ್ಕೆ ಯತ್ನಿಸಿದ್ದು, ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಅವರಿಂದ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಕ್ರಾಸ್ ಬಳಿ ಸೋಮವಾರ ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸುಮಾರು ಎಂಟು ಜನರು ಮೂರು ಮೋಟಾರ್ ಸೈಕಲ್ ಮತ್ತು ಕಾರೊಂದರಲ್ಲಿ ಸ್ಥಳಕ್ಕೆ ಬಂದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಬಲವಂತವಾಗಿ ಕಾರಿಗೆ ಹತ್ತಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು ಆರೋಪಿಗಳು ಮುಖ್ಯ ರಸ್ತೆಯಲ್ಲಿ ತಡೆದಿದ್ದಾರೆ, ಅಸಭ್ಯವಾಗಿ ನಿಂದಿಸಿದ್ದಾರೆ ಮತ್ತು ತಮ್ಮ ಕಾರಿಗೆ ಹತ್ತಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ವ್ಯಕ್ತಿ ಅದನ್ನು ವಿರೋಧಿಸಿ, ಕೂಗಾಡುತ್ತಿದ್ದಾಗ ಜನರು ಗುಂಪುಗೂಡಲು ಪ್ರಾರಂಭಿಸಿದ್ದಾರೆ. ಆಗ ಆರೋಪಿಗಳು ಭಯಭೀತರಾಗಿ ತಮ್ಮ ಕಾರು ಮತ್ತು ಮೋಟಾರ್ ಸೈಕಲ್‌ಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಿವಾಸಿಗಳ ಸಕಾಲಿಕ ಮಧ್ಯಪ್ರವೇಶದಿಂದ ಅಪಹರಣವನ್ನು ತಡೆಯಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
'ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಅಪಹರಣ ಯತ್ನದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗುರುತಿಸಿ ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖೆಯ ಭಾಗವಾಗಿ ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ' ಎಂದು ಪೊಲೀಸರು ತಿಳಿಸಿದ್ದಾರೆ.