ಬೆಂಗಳೂರು: ರಾಜ್ಯದ ಆರು ಸಾವಿರ ಗ್ರಾಮ ಪಂಚಾಯತಿಗಳಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹೆಸರು ಇಡಲು ತೀರ್ಮಾನ ಮಾಡಲಾಗಿದೆ. ಈ ಕುರಿತಾಗಿ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ರಾಜಭವನ ಚಲೋದಲ್ಲಿ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಪ್ರತಿಭಟನೆ ಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಪ್ರತಿ ಗ್ರಾಮ ಪಂಚಾಯತಿಗೆ ಮಹಾತ್ಮಾ ಗಾಂಧಿ ಹೆಸರು. ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡುತ್ತೇವೆ. 6000 ಗ್ರಾಮ ಪಂಚಾಯತಿಗಳು ಇವೆ. ಅವುಗಳಿಗೆ ಮಹಾತ್ಮಾ ಗಾಂಧಿ ಹೆಸರು ಇಡುತ್ತೇವೆ" ಎಂದು ತಿಳಿಸಿದರು.
ಮನರೇಗಾ ರದ್ದು ಮಾಡಿ ವಿಬಿ ಜಿ ರಾಮ್ ಜಿ ಕಾಯ್ದೆ ತಂದಿದ್ದಾರೆ. ದುರುದ್ದೇಶದಿಂದ ರಾಮ್ ಹೆಸರು ಬರುವ ರೀತಿ ಮಾಡಿದ್ದಾರೆ. ಅಲ್ಲಿ ಸೀತಾ ರಾಮ, ಕೌಶಲ್ಯ ರಾಮ, ದಶರಥ ರಾಮ ಇಲ್ಲ. ಮನಹೋಹನ್ ಸಿಂಗ್ ಇದ್ದಾಗ ಈ ಕಾಯ್ದೆ ಮಾಡಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಅನೇಕ ಕಾಯ್ದೆ ಜಾರಿಗೊಂಡಿತ್ತು. ಬಡವರು, ದಲಿತರು, ಅಲ್ಪಸಂಖ್ಯಾತರು, ರೈತರ ಬಗ್ಗೆ ಕಾಂಗ್ರೆಸ್ ಮಾತ್ರ ಚಿಂತನೆ ಮಾಡುತ್ತದೆ. ಬಿಜೆಪಿ ಎಲ್ಲಾ ಕಾರ್ಯಕ್ರಮ ನಾಶ ಮಾಡಿ ಉದ್ಯೋಗ ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಬಡವರಿಗೆ ಹಣಕಾಸು ಸಿಗಬಾರದು, ಅವರು ಸೇವಕರಾಗಿ ಇರಬೇಕು ಎಂಬ ಉದ್ದೇಶದಿಂದ ಆರ್ ಎಸ್ ಎಸ್ ಮಾರ್ಗದರ್ಶನ ಮಾಡಿ ಕಾಯ್ದೆ ರದ್ದು ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು. ಮನರೇಗಾ ದಲ್ಲಿ ಉದ್ಯೋಗ ಗ್ರಾಮ ಪಂಚಾಯತಿ ಮಟ್ಟದಲ್ಲಿ ತೀರ್ಮಾನ ಆಗುತ್ತಿತ್ತು. ಆದರೆ ಜಿ ರಾಮ್ ಜಿ ಯಲ್ಲಿ ದೆಹಲಿಯಲ್ಲಿ ಎಲ್ಲ ತೀರ್ಮಾನ ಆಗುತ್ತದೆ. ನೀವು ಉದ್ದೇಶಿಸಿದ ಕಡೆ ಕೆಲಸ ಸಿಗಲ್ಲ ಎಂದು ವಿವರಿಸಿದರು.
ಒಂದು ಪಂಚಾಯತಿಗೆ ಒಂದು ಕೋಟಿ ಸಿಗ್ತಾ ಇತ್ತು. ಆದರೆ ಇನ್ಮುಂದೆ ಸಿಗುವುದಿಲ್ಲ. ಕಾಯ್ದೆ ಜಾರಿಗೆ 40% ರಾಜ್ಯ ಸರ್ಕಾರ ಹಾಗೂ ಕೇಂದ್ರ 60% ಅನುದಾನ ನೀಡಬೇಕಾಗಿದೆ. ಕೇಂದ್ರದ ನೀತಿಯಿಂದಾಗಿ ಅನೇಕ ರಾಜ್ಯಗಳು ಕಷ್ಟದಲ್ಲಿವೆ. ಹೀಗಾಗಿ ಇಡೀ ದೇಶದಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಯಲಿದೆ. ವಿಬಿ ಜಿ ರಾವ್ ಜಿ ರದ್ದು ಮಾಡಿ ಮನರೇಗಾ ಪುನಸ್ಥಾಪನೆ ಮಾಡುವವರೆಗೆ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
“ಆರ್‌ಎಸ್‌ಎಸ್ ಕಾರ್ಯಕರ್ತ ಗೋಡ್ಸೆ ಮಹಾತ್ಮ ಗಾಂಧಿಯನ್ನು ಕೊಂದರು, ಮತ್ತು ಮೋದಿ ಮಹಾತ್ಮ ಗಾಂಧಿಯವರ ಹೆಸರಿನ ಜನಪರ ಯೋಜನೆಯನ್ನು ಕೊಂದಿದ್ದಾರೆ” ಎಂದು ಅವರು ಹೇಳಿದರು, MNREGA ಅಡಿಯಲ್ಲಿ, ಬಡವರಿಗೆ ಮತ್ತು ನಿರ್ಗತಿಕರಿಗೆ ಉದ್ಯೋಗ ನೀಡಲು ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡಲಾಯಿತು, ಈಗ ದೆಹಲಿ ನಿರ್ಧರಿಸುತ್ತದೆ ಎಂದು ಹೇಳಿದರು.
“ನೂರು ದಿನಗಳ ಖಾತರಿಪಡಿಸಿದ ಉದ್ಯೋಗವು ಸಾಂವಿಧಾನಿಕ ಹಕ್ಕಾಗಿತ್ತು ಮತ್ತು ಬಿಜೆಪಿ ಅದನ್ನು ಕಸಿದುಕೊಳ್ಳುತ್ತಿದೆ” ಎಂದು ಅವರು ಆರೋಪಿಸಿದರು. "ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಜೆಪಿ ಶಾಸಕರಿಗೆ ಈ ವಿಷಯದ ಬಗ್ಗೆ ಚರ್ಚಿಸದಂತೆ ನಿರ್ದೇಶನ ನೀಡಿದ್ದಾರೆ. ಆದರೆ ನಡೆಯುತ್ತಿರುವ ಶಾಸಕಾಂಗ ಅಧಿವೇಶನದಲ್ಲಿ ನಾವು ಈ ವಿಷಯವನ್ನು ಚರ್ಚಿಸುತ್ತೇವೆ" ಎಂದು ಅವರು ಹೇಳಿದರು.