ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು ಲೋಕಾಯುಕ್ತ ಸಲ್ಲಿಸಿದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಪುರಸ್ಕರಿಸಿದೆ. ಅದರಂತೆ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾಲೀಕ ದೇವರಾಜುಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ನಾಲ್ವರ ಕುರಿತಂತೆ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಕೋರ್ಟ್ ಪುರಸ್ಕರಿಸಿದೆ. ಇನ್ನು ಉಳಿದವರ ವಿರುದ್ಧ ತನಿಖೆ ನಡೆಸಲು ಕೋರ್ಟ್ ಆದೇಶಿಸಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತ ನೀಡಿದ್ದ ಕ್ಲೀನ್‌ಚಿಟ್ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಲೋಕಾಯುಕ್ತ ಪೊಲೀಸರ ಬಿ-ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹಾಲಿ ಮತ್ತು ಮಾಜಿ ಸಂಸದರು/ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್, ಮೈಸೂರಿನ ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಇತರ ಮೂವರು ಆರೋಪಿಗಳ ವಿರುದ್ಧ ತನಿಖೆ ಮುಂದುವರೆಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ' ರಿಪೋರ್ಟ್ ಅನ್ನು ಪುರಸ್ಕರಿಸಿದ್ದಾರೆ. ಇದರಿಂದ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ತನಿಖಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ದೂರುದಾರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆದಾಗ್ಯೂ, ಇತರ ಆರೋಪಿಗಳ ವಿರುದ್ಧ ನಡೆಸಲಾಗುತ್ತಿರುವ ಹೆಚ್ಚಿನ ತನಿಖೆಯನ್ನು ಮುಂದುವರಿಸಿ ಅಂತಿಮ ವರದಿಯನ್ನು ಸಲ್ಲಿಸಬೇಕು ಎಂದು ವಿಶೇಷ ನ್ಯಾಯಾಲಯ ಹೇಳಿದೆ.
2025ರ ಫೆಬ್ರವರಿ 20ರಂದು ಲೋಕಾಯುಕ್ತ ಪೊಲೀಸರು 'ಬಿ' ವರದಿಯನ್ನು ಸಲ್ಲಿಸಿದ ನಂತರ, ದೂರುದಾರರು 'ಬಿ' ರಿಪೋರ್ಟ್ ವಿರೋಧಿಸಿ ಅರ್ಜಿಯನ್ನು ಸಲ್ಲಿಸಿದರು. ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಜೆ. ವಿರುದ್ಧ ಕ್ರಮವಾಗಿ 1 ರಿಂದ 4 ರವರೆಗಿನ ಆರೋಪಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆಂದು ತನಿಖೆ ನಡೆಸಿತು.