ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೆಗಾ ಕಳ್ಳತನ ನಡೆದಿದ್ದು, ಮನೆಗೆಲಸದ ದಂಪತಿ ಭಾನುವಾರ ಕೆಂಪಾಪುರ ಮುಖ್ಯ ರಸ್ತೆಯಲ್ಲಿರುವ ಉದ್ಯಮಿಯೊಬ್ಬರ ಮನೆಯಲ್ಲಿದ್ದ ಬರೋಬ್ಬರಿ 18 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣ ಹಾಗೂ ನಗದನ್ನು ಕದ್ದು ಪರಾರಿಯಾಗಿದ್ದಾರೆ.
ಆರೋಪಿಗಳನ್ನು, ಕಳ್ಳತನ ನಡೆಯುವ ಸುಮಾರು 20 ದಿನಗಳ ಮುನ್ನ ಮನೆ ಕೆಲಸ ಮಾಡುವ ಕೆಲಸಕ್ಕೆ ಸೇರಿದ್ದ ದಿನೇಶ್(32) ಮತ್ತು ಅವರ ಪತ್ನಿ ಕಮಲಾ(25) ಎಂದು ಗುರುತಿಸಲಾಗಿದ್ದು, ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಉದ್ಯಮಿ ಶಿಮಂತ್ ಎಸ್ ಅರ್ಜುನ್(28) ಅವರು ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸಂಬಂಧಿಕರೊಬ್ಬರ ಭೂಮಿ ಪೂಜೆಗೆ ತಮ್ಮ ಕುಟುಂಬದೊಂದಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರ ಮನೆಯಲ್ಲಿ ಕೆಲಸಕ್ಕಿದ್ದ ದಿನೇಶ್ ಮತ್ತು ಕಮಲಾ ಈ ಕೃತ್ಯ ಎಸಗಿದ್ದಾರೆ.
ದಂಪತಿ ತಮ್ಮ ಸಹಚರರೊಂದಿಗೆ ಕಬ್ಬಿಣದ ರಾಡ್ ಬಳಸಿ ನೆಲ ಮಹಡಿಯಲ್ಲಿರುವ ಕಪಾಟನ್ನು ಮುರಿದು ಸುಮಾರು 10 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕದ್ದಿದ್ದಾರೆ.
ಮೊದಲ ಮಹಡಿಯ ಮಲಗುವ ಕೋಣೆಯಲ್ಲಿದ್ದ ಮತ್ತೊಂದು ಲಾಕರ್ ಅನ್ನು ಮುರಿದು, ಅದರಲ್ಲಿದ್ದ ಸುಮಾರು 1.5 ಕೆಜಿ ಚಿನ್ನ, ಸುಮಾರು 5 ಕೆಜಿ ಬೆಳ್ಳಿ ಆಭರಣಗಳು ಮತ್ತು 11.5 ಲಕ್ಷ ರೂಪಾಯಿ ನಗದು ಕಳವು ಮಾಡಲಾಗಿದೆ.
ಮನೆಯ ಮತ್ತೊಬ್ಬ ಕೆಲಸಗಾರ ಬಾಗಿಲುಗಳು ಮುರಿದಿರುವುದನ್ನು ಗಮನಿಸಿ ಮಧ್ಯಾಹ್ನ 12.30 ರ ಸುಮಾರಿಗೆ ಶಿಮಂತ್ ಅವರಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ಶೋಧ ಆರಂಭಿಸಲಾಗಿದೆ.
ಆರೋಪಿಗಳ ಬಂಧನಕ್ಕೆ ಹಲವು ತಂಡಗಳನ್ನು ರಚಿಸಲಾಗಿದೆ. ಹೊರ ರಾಜ್ಯಗಳಲ್ಲಿಯೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹತ್ತಾರು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ' ಎಂದು ಪೊಲೀಸರು ತಿಳಿಸಿದ್ದಾರೆ.