ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು ಲೋಕಾಯುಕ್ತ ಸಲ್ಲಿಸಿದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಪುರಸ್ಕರಿಸಿದೆ. ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾಲೀಕ ದೇವರಾಜುಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ನಾಲ್ವರ ಕುರಿತಂತೆ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಕೋರ್ಟ್ ಪುರಸ್ಕರಿಸಿದೆ. ಇನ್ನು ಉಳಿದವರ ವಿರುದ್ಧ ತನಿಖೆ ನಡೆಸಲು ಕೋರ್ಟ್ ಆದೇಶಿಸಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತ ನೀಡಿದ್ದ ಕ್ಲೀನ್‌ಚಿಟ್ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಲೋಕಾಯುಕ್ತ ಪೊಲೀಸರ ಬಿ-ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದರು.
ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಇಂದು ಫೋನ್ ಟ್ಯಾಪಿಂಗ್ ವಿಚಾರ ಗದ್ದಲಕ್ಕೆ ಕಾರಣಾವಾಯಿತು. ಸದನ ಆರಂಭವಾಗುತ್ತಿದ್ದಂತೆಯೇ, ವಿಮಾನ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರಿಗೆ ಸಂತಾಪ ಸೂಚಿಸಲಾಯಿತು. ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ನಿರ್ವಹಿಸುವ ಲಿಯರ್‌ಜೆಟ್ 46 ವಿಮಾನ ಇಂದು ಮುಂಜಾನೆ ಬಾರಾಮತಿಯಲ್ಲಿ ಇಳಿಯುವ ವೇಳೆ ಪತನಗೊಂಡಿತು. ವಿಮಾನಯಾನ ನಿಯಂತ್ರಕ ಡಿಜಿಸಿಎ ಪ್ರಕಾರ, ಸಿಬ್ಬಂದಿ ಸೇರಿದಂತೆ ಐದು ಜನರು ವಿಮಾನದಲ್ಲಿದ್ದರು. ಬಳಿಕ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೆಹಲಿಯಿಂದ ಕರೆಗಳು ಬರುತ್ತಿದ್ದು, ಕೇಂದ್ರದ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಾಜ್ಯ ಸಚಿವ ಎಚ್.ಕೆ. ಪಾಟೀಲ್ ನೀಡಿದ್ದ ಹೇಳಿಕೆ ಬುಧವಾರ ಸದನದಲ್ಲಿ ವಾಗ್ವಾದಕ್ಕೆ ಕಾರಣವಾಯಿತು. ಲೋಕಭವನದಲ್ಲಿ ಕಾಂಗ್ರೆಸ್ ಸರ್ಕಾರ ಫೋನ್ ಕದ್ದಾಲಿಕೆ ಮಾಡಿದೆ ಎಂದು ಬಿಜೆಪಿ ಆರೋಪಿಸಿದ್ದರಿಂದ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಬಿಜೆಪಿ ಶಾಸಕರು ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು "ಫೋನ್ ಕದ್ದಾಲಿಕೆ ಸರ್ಕಾರ" ಎಂದು ಕರೆದರು ಮತ್ತು ಲೋಕಭವನ ಮತ್ತು ರಾಜ್ಯಪಾಲರು ಸ್ವೀಕರಿಸಿದ ಫೋನ್ ಕರೆಗಳ ಮಾಹಿತಿಯನ್ನು ರಾಜ್ಯದ ಸಚಿವರು ಹೇಗೆ ಪಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು. ಈಮಧ್ಯೆ, ವಿಧಾನಪರಿಷತ್ ಕಲಾಪ ಕ್ರಮಬದ್ಧವಾಗಿ ನಡೆಯದಿರುವುದಕ್ಕೆ ಅಸಮಾಧಾನಗೊಂಡ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಧಾನಪರಿಷತ್ ಕಾರ್ಯವಿಧಾನ ಹಾಗೂ ನಡವಳಿಕೆ ಕುರಿತ ಪುಸ್ತಕ ಹರಿದು ಬಿಸಾಡಿ ಆಕ್ರೋಶ ಹೊರಹಾಕಿದರು.
ರಾಜಧಾನಿ ಬೆಂಗಳೂರಿನಲ್ಲಿ ದರೋಡೆ ನಡೆದಿದ್ದು, ಮನೆಗೆಲಸದ ದಂಪತಿ ಕೆಂಪಾಪುರ ಮುಖ್ಯ ರಸ್ತೆಯಲ್ಲಿರುವ ಉದ್ಯಮಿಯೊಬ್ಬರ ಮನೆಯಲ್ಲಿದ್ದ ಬರೋಬ್ಬರಿ 18 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣ ಹಾಗೂ ನಗದನ್ನು ಕದ್ದು ಪರಾರಿಯಾಗಿದ್ದಾರೆ. ಆರೋಪಿಗಳನ್ನು, ಕಳ್ಳತನ ನಡೆಯುವ ಸುಮಾರು 20 ದಿನಗಳ ಮುನ್ನ ಮನೆಗೆಲಸಕ್ಕೆ ಸೇರಿದ್ದ ದಿನೇಶ್ ಮತ್ತು ಅವರ ಪತ್ನಿ ಕಮಲಾ ಎಂದು ಗುರುತಿಸಲಾಗಿದ್ದು, ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಉದ್ಯಮಿ ಶಿಮಂತ್ ಎಸ್ ಅರ್ಜುನ್(28) ಅವರು ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸಂಬಂಧಿಕರೊಬ್ಬರ ಭೂಮಿ ಪೂಜೆಗೆ ತಮ್ಮ ಕುಟುಂಬದೊಂದಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರ ಮನೆಯಲ್ಲಿ ಕೆಲಸಕ್ಕಿದ್ದ ದಿನೇಶ್ ಮತ್ತು ಕಮಲಾ ಈ ಕೃತ್ಯ ಎಸಗಿದ್ದಾರೆ. ದಂಪತಿ ಕಬ್ಬಿಣದ ರಾಡ್ ಬಳಸಿ ನೆಲ ಮಹಡಿಯಲ್ಲಿರುವ ಕಪಾಟನ್ನು ಮುರಿದು ಸುಮಾರು 10 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕದ್ದಿದ್ದಾರೆ.
ಚಿತ್ರದುರ್ಗದಲ್ಲಿ ಬಸ್ ದುರಂತ ಘಟನೆ ಮಾಸುವ ಮುನ್ನವೇ ಶಿವಮೊಗ್ಗದಲ್ಲಿ ಮತ್ತೊಂದು ಅವಘಡ ನಡೆದಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ಖಾಸಗಿ ಸ್ಲೀಪರ್ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸೂಡುರು ಬಳಿ ನಿನ್ನೆ ತಡರಾತ್ರಿ ನಡೆದಿದೆ. ಹೊಸನಗರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ 36 ಪ್ರಯಾಣಿಕರನ್ನು ಹೊಂದಿದ್ದ ಖಾಸಗಿ ನಾನ್-ಎಸಿ ಸ್ಲೀಪರ್ ಬಸ್ ನಿನ್ನೆ ಮಂಗಳವಾರ ತಡರಾತ್ರಿ ಬೆಂಕಿಗೆ ಆಹುತಿಯಾಗಿದೆ. ವಾಹನವು ತೀವ್ರವಾಗಿ ಹಾನಿಗೊಳಗಾಗಿದ್ದರೂ, ಎಲ್ಲಾ ಪ್ರಯಾಣಿಕರು ಪಾರಾಗಿದ್ದಾರೆಂದು ಅಧಿಕಾರಿಗಳು ದೃಢಪಡಿಸಿದರು, 8 ಮಂದಿ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಚಾಲಕನ ಅದ್ಭುತ ಸಮಯಪ್ರಜ್ಞೆಯಿಂದಾಗಿ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ.