ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ನಿಯಮ ಉಲ್ಲಂಘಿಸಿ ತಮ್ಮ ಸ್ನೇಹಿತನಾದ ಪೊಲೀಸ್ ಕಾನ್‌ಸ್ಟೇಬಲ್‌ಗೆ ನಟ ದರ್ಶನ್ ಅವರನ್ನು ಭೇಟಿ ಮಾಡಿಸಿದ ಹಿನ್ನೆಲೆಯಲ್ಲಿ ಕಾರಾಗೃಹದ ವಾರ್ಡನ್‌ವೊಬ್ಬರು ವರ್ಗಾವಣೆಗೊಂಡಿದ್ದಾರೆ.
ವಾರ್ಡನ್ ಪ್ರಭು ಚೌವ್ಹಾಣ್ ಎತ್ತಂಗಡಿ ಆಗಿದ್ದು, ಇತ್ತೀಚೆಗೆ ಸ್ನೇಹಿತನ ಕೋರಿಕೆ ಮೇರೆಗೆ ಆತನಿಗೆ ದರ್ಶನ್‌ರನ್ನು ಭೇಟಿ ಮಾಡಿಸಿದ್ದರು.
ಇದರ ಬೆನ್ನಲ್ಲೇ ಕಾರಾಗೃಹಗಳ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್ ಅವರು, ಘಟನೆಯ ಕುರಿತು ಇಲಾಖಾ ತನಿಖೆಗೆ ಆದೇಶಿಸಿ, ವಾರ್ಡನ್ ಚೌವ್ಹಾಣ್ ಅವರನ್ನು ಚಾಮರಾಜನಗರ ಜೈಲಿಗೆ ವರ್ಗಾವಣೆ ಮಾಡಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಜನವರಿ 24ರಂದು ಯಲಹಂಕ ಪೊಲೀಸ್ ಠಾಣೆಯ ಕೆಲವು ಕಾನ್ಸ್‌ಟೇಬಲ್‌ಗಳು ಒಬ್ಬ ಆರೋಪಿಯನ್ನು ಜೈಲಿಗೆ ಹಸ್ತಾಂತರಿಸಲು ಬಂದಿದ್ದರು. ಜೈಲನ್ ವಾರ್ಡನ್ ಹಾಗೂ ಪೊಲೀಸ್ ಸಿಬ್ಬಂದಿ ಪರಸ್ಪರ ಪರಿಚಿತರಾಗಿದ್ದು, ಭೇಟಿ ವೇಳೆ ಜೈಲಿನೊಳಗೆ ಇದ್ದ ನಟ ಹಾಗೂ ಆರೋಪಿ ದರ್ಶನ್‌ನ್ನು ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ವಾರ್ಡನ್ ಸಿಸಿಟಿವಿ ನಿಗಾವನ್ನು ತಪ್ಪಿಸಿ ಪೊಲೀಸ್ ಸಿಬ್ಬಂದಿಯನ್ನು ನಟ ದರ್ಶನ್ ಇದ್ದ ಕೋಣೆಯ ಸಮೀಪಕ್ಕೆ ಕರೆದೊಯ್ದಿದ್ದಾರೆ. ಆದರೆ, ಪೊಲೀಸ್ ಸಿಬ್ಬಂದಿ ನಟ ದರ್ಶನ್ ಅವರೊಂದಿಗೆ ಯಾವುದೇ ಸಂಭಾಷಣೆ ನಡೆಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಘಟನೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಜೈಲು ಆಡಳಿತವು ಆಂತರಪಿಕ ತನಿಖೆ ಆರಂಭಿಸಿದ್ದು, ಮುಂದಿನ ಕ್ರಮವನ್ನು ತನಿಖಾ ವರದಿ ಆಧರಿಸಿ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.