ಬೆಂಗಳೂರು: ಬೆಂಗಳೂರಿನಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ನಡೆಸಿದ್ದು, ಮಹಿಳೆಗೆ ಗಂಭೀರ ಗಾಯಗಳಾಗಿವೆ.
ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ಪ್ರದೇಶದಲ್ಲಿ ಜನವರಿ 26ರಂದು ಈ ಘಟನೆ ನಡೆದಿದ್ದು, ದಾಳಿಯಲ್ಲಿ ಮಹಿಳೆ ಕುತ್ತಿಗೆ ಸೇರಿದಂತೆ ಮುಖ, ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ನಾಯಿಯ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಪೊಲೀಸ್ ದೂರು ದಾಖಲಾಗಿದ್ದು, ಈ ಘಟನೆಯು ನಗರದಲ್ಲಿ ಸಾಕು ಪ್ರಾಣಿಗಳ ನಿರ್ವಹಣೆ,ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ.
ಆಗಿದ್ದೇನು?
ಹೆಚ್.ಎಸ್.ಆರ್ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ, ಬೆಳಿಗ್ಗೆ ಸುಮಾರು 6 ಗಂಟೆ 54 ನಿಮಿಷಕ್ಕೆ ಈ ಘಟನೆ ನಡೆದಿದೆ. ಮಹಿಳೆ ಪ್ರತಿದಿನದಂತೆ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದಾಗ ಸಮೀಪದ ಮನೆಯೊಂದಕ್ಕೆ ಸೇರಿದ ಸಾಕು ನಾಯಿ ಏಕಾಏಕಿ ದಾಳಿ ನಡೆಸಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ನಾಯಿ ಮಹಿಳೆಯ ಕುತ್ತಿಗೆಗೆ ಕಚ್ಚಿ ಬಿಡದೇ ಹಿಡಿದುಕೊಂಡಿದ್ದು, ಆಕೆಯನ್ನು ರಕ್ಷಿಸಲು ಮುಂದಾದ ವ್ಯಕ್ತಿಯ ಮೇಲೆಯೂ ನಾಯಿ ದಾಳಿ ನಡೆಸಿದೆ. ಈ ವೇಳೆ ಸ್ಥಳದಲ್ಲಿ ಕೆಲಕಾಲ ಗದ್ದಲ ಉಂಟಾಗಿತ್ತು. ದಾಳಿಯಿಂದ ಮಹಿಳೆಯ ಮುಖ, ಕೈ ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ವೈದ್ಯರು ಮುಖ ಮತ್ತು ಕತ್ತಿನ ಭಾಗದಲ್ಲಿ 50ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಾಳಿ ನಡೆಸಿದ ನಾಯಿ ಅಮರೇಶ್ ರೆಡ್ಡಿ ಎಂಬ ವ್ಯಕ್ತಿಗೆ ಸೇರಿದ ಸಾಕು ನಾಯಿಯಾಗಿದ್ದು, ನಾಯಿಯನ್ನು ಸೂಕ್ತವಾಗಿ ಕಟ್ಟಿಹಾಕದೇ ಅಥವಾ ನಿಯಂತ್ರಣವಿಲ್ಲದೆ ಬಿಡಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ಮಹಿಳೆಯ ಪತಿ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಮರೇಶ್ ರೆಡ್ಡಿ ವಿರುದ್ಧ ದೂರು ದಾಖಲಿಸಿದ್ದಾರೆ. ನಾಯಿಯ ಮಾಲೀಕರ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ
ಪೊಲೀಸ್ ತನಿಖೆ
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸೇರಿದಂತೆ, ಸಾಕು ನಾಯಿಯನ್ನು ಹೇಗೆ ಮತ್ತು ಯಾವ ಪರಿಸ್ಥಿತಿಯಲ್ಲಿ ಬಿಡಲಾಗಿತ್ತು ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.