ಬೆಂಗಳೂರು: ರಿಯಲ್ ಎಸ್ಟೇಟ್ ಕಂಪನಿಯಾದ 'ಕಾನ್ಫಿಡೆಂಟ್ ಗ್ರೂಪ್' ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಬಿಗ್‌ಬಾಸ್ ಸೀಸನ್ 11ರ ವಿಜೇತ ಹನುಮಂತ ಅವರು ಭಾವುಕರಾಗಿದ್ದಾರೆ.
ಸಿ. ಜೆ ರಾಯ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಹನುಮಂತ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು, ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯನೇ ಇಲ್ಲ ಸರ್ ಎಂದು ಬರೆದುಕೊಂಡಿದ್ದಾರೆ.
ತುಂಬಾ ದುಃಖಕರ ಸಂಗತಿ. ಅಂದು ಸರಿಗಮಪ ಸೀಸನ್ 15ರಲ್ಲಿ ನಾನು ರನ್ನರ್ ಅಪ್ ಆಗಿದ್ದಾಗ ನನಗೆ ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು. ಅಲ್ಲಿಂದ ಹಿಡಿದು ಬಿಗ್‌ಬಾಸ್ ಸೀಸನ್ 11ರಲ್ಲೂ ಕೂಡ ವಿಜೇತನಾಗಿದ್ದಾಗ ನನಗೆ ಪ್ರೀತಿಯಿಂದ ಹಣವನ್ನು ಕೊಡುವುದರ ಮೂಲಕ ಗೆಲುವನ್ನು ಸಂಭ್ರಮಿಸಿದವರು ನೀವು. ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ ಸರ್. ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್’ ಎಂದು ಬರೆದುಕೊಂಡಿದ್ದಾರೆ.
ಸಿ.ಜೆ. ರಾಯ್ ಅವರು ಸರಿಗಮಪ ಸೀಸನ್ 15ರಲ್ಲಿ ಹನುಮಂತು ರನ್ನರ್ ಅಪ್ ಆಗಿದ್ದಾಗ ಬಹುಮಾನದ ರೂಪದಲ್ಲಿ ಹಣ ನೀಡಿದ್ದರು. ಬಳಿಕ ಬಿಗ್‌ಬಾಸ್ ಸೀಸನ್ 11ರಲ್ಲಿಯೂ ಹನುಮಂತ ಗೆದ್ದಾಗ ಅವರೇ ಖುದ್ದು ಹಣವನ್ನು ನೀಡಿದ್ದರು. ಈ ಬಗ್ಗೆ ಹನುಮಂತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.