ತುಮಕೂರು: ತುಮಕೂರಿನಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ವಶಪಡಿಸಿಕೊಂಡಿದ್ದ ಕಾರನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಸ್ವೀಕರಿಸಿದ ಆರೋಪದ ಮೇಲೆ ತುಮಕೂರು ಗ್ರಾಮಾಂತರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಚೇತನ್ ಕುಮಾರ್ ಎಸ್ ಅವರನ್ನು ಶುಕ್ರವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ.
ಲೋಕಾಯುಕ್ತ ಅಧಿಕಾರಿಗಳ ಪ್ರಕಾರ, ಕಾರನ್ನು ಬಿಡುಗಡೆ ಮಾಡಲು ನಾಗೇಶ್ ಎಸ್‌ಕೆ ಎಂಬುವವರಿಂದ ಪಿಎಸ್ಐ ಐದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ನಂತರ, ಒಂದು ಲಕ್ಷ ರೂಪಾಯಿಗೆ ಲಂಚವನ್ನು ಇಳಿಸಲಾಗಿತ್ತು.
ಈ ಪೈಕಿ ಶುಕ್ರವಾರ ರಾತ್ರಿ, ಚೇತನ್ ಮುಂಗಡವಾಗಿ ₹40,000 ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಪಿ ಅಗ್ರಹಾರ ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದರಾಜು ₹4 ಲಕ್ಷ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗೋವಿಂದರಾಜು ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಎಂಡಿ ಅಕ್ಬರ್ (42) ನೀಡಿದ ದೂರಿನ ಮೇರೆಗೆ ಇನ್ಸ್‌ಪೆಕ್ಟರ್ ಸಿಕ್ಕಿಬಿದ್ದಿದ್ದಾರೆ.