ಬೆಂಗಳೂರು: ಬೆಂಗಳೂರಿನ ಸರ್ಜಾಪುರ ಸಮೀಪದ ಬಿಕ್ಕನಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಗುರುವಾರ ಬೈಕ್ ಜೊತೆಗೆ ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಸಾವಿನ ಕಾರಣ ನಿಗೂಢವಾಗಿದೆ.
ಮೃತ ಯುವಕನನ್ನು ಆಂಧ್ರಪ್ರದೇಶದ ಗುಂಟೂರು ಮೂಲದ 26 ವರ್ಷದ ವಂಶಿಕೃಷ್ಣ ಎಂದು ಗುರುತಿಸಲಾಗಿದೆ. ಈ ಸಾವಿನ ಹಿಂದೆ ಕೊಲೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಿನ್ನೆ ಸಂಜೆ ಬಿಕ್ಕನಹಳ್ಳಿ ರಸ್ತೆಯ ಬಳಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಬೈಕ್ ಹಾಗೂ ಯುವಕನ ದೇಹ ಸಂಪೂರ್ಣ ಸುಟ್ಟು ಕರಕಲಾಗಿರುವುದು ಪತ್ತೆಯಾಗಿತ್ತು.
ನಂತರ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಪಿಜಿಯೊಂದರಲ್ಲಿ ವಾಸವಾಗಿದ್ದ ಮೃತ ವಂಶಿ ಕೃಷ್ಣ, ಎನ್‌ಟಿಟಿಎಫ್ ಕಾಲೇಜಿನಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ಮಾಡಿದ್ದು, ಖಾಸಗಿ ಕಂಪನಿಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದರು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ನಿರುದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.
ಬೈಕ್‌ನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಮೃತನ ಸಹೋದರ ಶಿವಕೃಷ್ಣನನ್ನು ಸಂಪರ್ಕಿಸಿದ್ದಾರೆ. ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರು ಸ್ಥಳಕ್ಕೆ ಬಂದು ಮೃತದೇಹವನ್ನು ಗುರುತಿಸಿದ್ದಾರೆ.
ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಮಹೇಂದ್ರ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಮೃತನ ಮೊಬೈಲ್ ಕರೆಗಳ ವಿವರ, ಸಿಸಿಟಿವಿ ದೃಶ್ಯಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ
ಇದು ಆತ್ಮಹತ್ಯೆಯಲ್ಲ, ವಂಶಿ ಕೃಷ್ಣನನ್ನು ಕೊಲೆ ಮಾಡಿ ನಂತರ ಬೆಂಕಿ ಹಚ್ಚಿದ್ದಾರೆ. ಅತನಿಗೆ ಯಾರೊಂದಿಗೂ ದ್ವೇಷ ಇರಲಿಲ್ಲ. ಯಾವುದೇ ಪ್ರೇಮ ಸಂಬಂಧವೂ ಇರಲಿಲ್ಲ. ಆತ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.