ಬೆಂಗಳೂರು: ಬಾಯಿ ಕ್ಯಾನ್ಸರ್‌ಗೆ ಹೊಸ ಚಿಕಿತ್ಸಾ ಮಾರ್ಗ ಕಂಡುಹಿಡಿಯುವ ನಿಟ್ಟಿನಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆ (IISc) ಮತ್ತು ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸಂಶೋಧಕರು ಕಡಿಮೆ ಆವರ್ತನದ (Low frequency) ಅಲ್ಟ್ರಾಸೌಂಡ್ ತಂತ್ರಜ್ಞಾನದ ಮೇಲೆ ಭರವಸೆ ಇಟ್ಟಿದ್ದಾರೆ.
ಸಂಶೋಧನೆಯ ಪ್ರಕಾರ, ಬಾಯಿಯ ಕ್ಯಾನ್ಸರ್ ಕೋಶಗಳು ಅಲ್ಟ್ರಾಸೌಂಡ್‌ನಿಂದ ಉಂಟಾಗುವ ಮಧ್ಯಮ ಮಟ್ಟದ ಯಾಂತ್ರಿಕ ಪ್ರಚೋದನೆಗಳಿಗೆ (Mechanical stimulation) ಹೆಚ್ಚು ದುರ್ಬಲವಾಗಿರುತ್ತವೆ. ಈ ರೀತಿಯ ಅಲ್ಟ್ರಾಸೌಂಡ್ ಪ್ರಚೋದನೆಗೆ ಒಳಪಡಿಸಿದಾಗ ಕ್ಯಾನ್ಸರ್ ಕೋಶಗಳು ಆಯ್ದ ರೀತಿಯಲ್ಲಿ ನಾಶವಾಗುತ್ತವೆ. ಆರೋಗ್ಯಕರ ಬಾಯಿಯ ಎಪಿಥೀಲಿಯಲ್ ಕೋಶಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಸಂಶೋಧಕರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
‘Revealing biochemical vulnerabilities in oral cancer cells using 3D coculture platform and low-frequency ultrasound’ ಎಂಬ ಶೀರ್ಷಿಕೆಯ ಈ ಸಂಶೋಧನಾ ಲೇಖನ ಸೈನ್ಸ್ ಡೈರೆಕ್ಟ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಅಧ್ಯಯನದ ಸಹ-ಲೇಖಕರೂ ಆಗಿರುವ ಐಐಎಸ್‌ಸಿಯ ಜೈವಿಕ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಜಯ್ ತಿಜೋರೆ, ಈ ಅಧ್ಯಯನದ ವಿಶೇಷತೆ ಎಂದರೆ ಅಲ್ಟ್ರಾಸೌಂಡ್ ತಂತ್ರಜ್ಞಾನವು ಕ್ಯಾನ್ಸರ್ ಕೋಶಗಳ ಯಾಂತ್ರಿಕ ದುರ್ಬಲತೆಯನ್ನು ಬಳಸಿಕೊಂಡು ಅವುಗಳನ್ನು ಗುರಿಯಾಗಿಸುತ್ತದೆ. ಶಾಖ ಅಥವಾ ಔಷಧಗಳನ್ನು ಬಳಸುವ ಬದಲು, ಮಧ್ಯಮ ಮಟ್ಟದ ಯಾಂತ್ರಿಕ ಬಲವನ್ನು ಉಪಯೋಗಿಸಿ ಕ್ಯಾನ್ಸರ್ ಕೋಶಗಳನ್ನು ಚೇತರಿಸಿಕೊಳ್ಳಲಾಗದಷ್ಟು ಹಾನಿಗೊಳಿಸಲಾಗುತ್ತದೆ ಎಂದು ವಿವರಿಸಿದರು.
ಸಂಶೋಧನಾ ತಂಡವು ಮತ್ತೊಂದು ಮಹತ್ವದ ಅಂಶವನ್ನೂ ಪತ್ತೆಹಚ್ಚಿದೆ. ಅಲ್ಟ್ರಾಸೌಂಡ್ ಚಿಕಿತ್ಸೆಯಿಂದ ಕ್ಯಾನ್ಸರ್ ಕೋಶಗಳು ಸುತ್ತಮುತ್ತಲಿನ ಅಂಗಾಂಶಗಳಿಗೆ ಹರಡುವ ಹಾಗೂ ಆಕ್ರಮಣ ಮಾಡುವ ಸಾಮರ್ಥ್ಯವು ಸಾಕಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.