

ವಿಶಾಖಪಟ್ಟಣ: ನೃತ್ಯ ತಂಡದೊಂದಿಗೆ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದ ಅಸ್ಸಾಂನ ಕಾಮರೂಪ್ ಜಿಲ್ಲೆಯ 20 ವರ್ಷದ ಡ್ಯಾನ್ಸರ್, ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ರೈಲು ಹಳಿಯ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
'ದಿಬ್ರುಗಢ್ ವಿವೇಕ್ ಎಕ್ಸ್‌ಪ್ರೆಸ್' ರೈಲಿನಲ್ಲಿ ಮನೆಗೆ ಮರಳುತ್ತಿದ್ದಾಗ ಈ ಯುವತಿ ನಾಪತ್ತೆಯಾಗಿದ್ದರು. ಪೊಲೀಸರು ಯುವತಿ ಸಾವಿನ ಕುರಿತು ತನಿಖೆ ನಡೆಸುತ್ತಿದ್ದಾರೆ.
ಮೃತ ಯುವತಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಗುವಾಹಟಿಯ 'ಬಿ. ಬೊರುವಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಇವರ ಕುಟುಂಬ ಕಾಮರೂಪ್ ಜಿಲ್ಲೆಗೆ ಸೇರಿದೆ.
ಪೊಲೀಸರ ಪ್ರಕಾರ, ಯುವತಿ ನೃತ್ಯ ತಂಡವೊಂದನ್ನು ಸೇರಿಕೊಂಡು ನೃತ್ಯ ಕಾರ್ಯಕ್ರಮ ನೀಡಲು ವಿಶಾಖಪಟ್ಟಣಕ್ಕೆ ತೆರಳಿದ್ದರು. ಆದರೆ ಅಕ್ಟೋಬರ್ 10 ರಂದು ಗುವಾಹಟಿಯಲ್ಲಿ ಬ್ಯಾಂಕ್ ಪರೀಕ್ಷೆ ಇದ್ದ ಕಾರಣ ಯುವತಿ ವಾಪಸ್ ಮನೆಗೆ ಬರಲು ನಿರ್ಧರಿಸಿದ್ದರು.
"ಅಕ್ಟೋಬರ್ 5 ರ ಸಂಜೆ, ಅವರು 'ಸಿಲ್ಚಾರ್ ಎಕ್ಸ್‌ಪ್ರೆಸ್'ಗಾಗಿ ಆನ್‌ಲೈನ್‌ನಲ್ಲಿ 'ತತ್ಕಾಲ್' ಟಿಕೆಟ್ ಕಾಯ್ದಿರಿಸಲು ಯತ್ನಿಸಿದ್ದರು. ಆದರೆ ಕಾಯ್ದಿರಿಸುವಿಕೆ(reservation) ದೃಢೀಕರಣಗೊಂಡಿರಲಿಲ್ಲ" ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಅವರು ವಿಶಾಖಪಟ್ಟಣಂ ರೈಲು ನಿಲ್ದಾಣಕ್ಕೆ ತೆರಳಿ, ಅಸ್ಸಾಂಗೆ ಹೋಗುವ ವಿವೇಕ್ ಎಕ್ಸ್‌ಪ್ರೆಸ್(ರೈಲು ಸಂಖ್ಯೆ 22503) ರೈಲನ್ನು ಹತ್ತಿದ್ದಾರೆ.
ಯುವತಿಯ ತಾಯಿಯ ದೂರಿನ ಪ್ರಕಾರ, ಅಕ್ಟೋಬರ್ 5 ರ ರಾತ್ರಿ 11:50 ಕ್ಕೆ ರೈಲು ಹತ್ತಿದ್ದಳು. ರೈಲು ವಿಶಾಖಪಟ್ಟಣದಿಂದ ರಾತ್ರಿ 12:10 ಕ್ಕೆ ಹೊರಟಿತ್ತು. ಅಕ್ಟೋಬರ್ 7 ರಂದು ಬೆಳಿಗ್ಗೆ 9:05 ಕ್ಕೆ ಗುವಾಹಟಿಯನ್ನು ತಲುಪಬೇಕಿತ್ತು. ಪ್ರಯಾಣದ ಸಮಯದಲ್ಲಿ, ತಮ್ಮ ಸ್ನೇಹಿತರಿಗೆ ಬೋಗಿಯಲ್ಲಿ ವಿಪರೀತ ಜನಸಂದಣಿ ಇರುವ ಬಗ್ಗೆ ತಿಳಿಸಿದ್ದಳು. ಅಲ್ಲದೇ ತನ್ನ ಸುತ್ತಲೂ ಬರೀ ಪುರುಷ ಪ್ರಯಾಣಿಕರೇ ಇದ್ದಿದ್ದರಿಂದ ಭಯಗೊಂಡಿದ್ದಾಗಿ ಹೇಳಿದ್ದಳು.
ಕುಟುಂಬಕ್ಕೆ ಕಳುಹಿಸಿದ ಕೊನೆಯ ಸಂದೇಶದಲ್ಲಿ, ತನ್ನ ಸುತ್ತಲೂ ಬಹಳಷ್ಟು ಪುರುಷರಿದ್ದ ಕಾರಣ ಭಯವಾಗುತ್ತಿದೆ ಎಂದು ಯುವತಿ ಹೇಳಿದ್ದಾಳೆ. ಅಕ್ಟೋಬರ್ 6 ರಂದು ಮಧ್ಯಾಹ್ನ 1:30ರ ಸುಮಾರಿಗೆ ಕುಟುಂಬದವರು ಕೊನೆಯದಾಗಿ ಯುವತಿ ಜೊತೆ ಮಾತನಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊನೆಯ ಸಂಭಾಷಣೆ ಅಕ್ಟೋಬರ್ 6 ರಂದು ನಸುಕಿನ ಜಾವ 2:39 ಕ್ಕೆ ನಡೆದಿದೆ. ನಂತರ ಆಕೆಯ ಫೋನ್ ಸಂಪರ್ಕಕ್ಕೆ ಸಿಗದೆ ಸ್ವಿಚ್ ಆಫ್ ಆಗಿತ್ತು.
ಈ ಸಂಬಂಧ ಯುವತಿಯ ತಾಯಿ ಗುವಾಹಟಿಯಲ್ಲಿರುವ ರೈಲ್ವೆ ಪೊಲೀಸರಿಗೆ (GRP) ದೂರು ನೀಡಿದ್ದರು. ರೈಲ್ವೆ ಸಹಾಯವಾಣಿ ಸಂಖ್ಯೆ 139 ರ ಮೂಲಕವೂ ದೂರು ದಾಖಲಿಸಿದ್ದರು. ಯುವತಿಯನ್ನು ಪತ್ತೆಹಚ್ಚಲು ಸಹಾಯ ಕೋರಿ ಸಂಬಂಧಿಕರು ರೈಲ್ವೆ ರಕ್ಷಣಾ ಪಡೆ (RPF) ಮತ್ತು ಅಸ್ಸಾಂ ಪೊಲೀಸರಿಗೂ ಮಾಹಿತಿ ನೀಡಿದ್ದರು. ರೈಲಿನ S2 ಬೋಗಿಯಲ್ಲಿ ಬ್ಯಾಗ್ ಪತ್ತೆಯಾದ ನಂತರ ರೈಲ್ವೆ ಪೊಲೀಸರು ಆ ಮಾರ್ಗದಲ್ಲಿ ಹುಡುಕಾಟ ಆರಂಭಿಸಿದ್ದರು. ಹುಡುಕಾಟದ ವೇಳೆ ಮಲಯಾಪುರಂ ಸಮೀಪದ ಅರಣ್ಯ ಪ್ರದೇಶದಲ್ಲಿ ಯುವತಿ ಮೃತದೇಹ ಪತ್ತೆಯಾಗಿದೆ.
ಯುವತಿಯ ಸಾವಿಗೆ ನಿಖರ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದರೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಸಾವು ಸಂಭವಿಸಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಮರಣೋತ್ತರ ಪರೀಕ್ಷೆ ಮತ್ತು ಮುಂದಿನ ವಿಧಿವಿಜ್ಞಾನ ತನಿಖೆಯು ಸಾವಿನ ಕಾರಣವನ್ನು ಸ್ಪಷ್ಟಪಡಿಸುವ ನಿರೀಕ್ಷೆಯಿದೆ.