ಬೆಂಗಳೂರು: 'ಸೇಫ್ ಫುಟ್‌ಪಾತ್' (ಸುರಕ್ಷಿತ ಪಾದಚಾರಿ ಮಾರ್ಗ) ಅಭಿಯಾನವು ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಗರದಾದ್ಯಂತ ಅತಿಕ್ರಮಣಕ್ಕೊಳಗಾಗಿದ್ದ 202.7 ಕಿಲೋ ಮೀಟರ್ ಪಾದಚಾರಿ ಮಾರ್ಗಗಳನ್ನು ನಾಗರಿಕ ಸಂಸ್ಥೆಗಳು 4 ದಿನಗಳಲ್ಲಿ ತೆರವುಗೊಳಿಸಿವೆ. ಈ ಕಾರ್ಯಾಚರಣೆಯು ಮುಖ್ಯವಾಗಿ ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗುವ ಭೌತಿಕ ಅತಿಕ್ರಮಣಗಳನ್ನು ತೆರವುಗೊಳಿಸುವುದರ ಮೇಲೆ ಕೇಂದ್ರೀಕರಿಸಿದ್ದು, ಇದು ಕೇವಲ ಬೀದಿಬದಿ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡ ಅಭಿಯಾನವಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಐದು ನಗರ ನಿಗಮಗಳ ವ್ಯಾಪ್ತಿಯಲ್ಲಿ ಒಟ್ಟು 61.45 ಕಿ.ಮೀ. ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಲಾಗಿದ್ದು, ಅಭಿಯಾನ ಆರಂಭವಾದ ಬಳಿಕ ಇದುವರೆಗೆ ತೆರವುಗೊಳಿಸಿರುವ ಒಟ್ಟು ಅತಿಕ್ರಮಿತ ಪಾದಚಾರಿ ಮಾರ್ಗಗಳ ಉದ್ದ 202 ಕಿ.ಮೀ.ಗಿಂತ ಹೆಚ್ಚಾಗಿದೆ.
ಮೊದಲ ಎರಡು ದಿನಗಳಲ್ಲಿ 141 ಕಿ.ಮೀ. ಅತಿಕ್ರಮಿತ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಸಣ್ಣ ಅಂಗಡಿಗಳು, ತಳ್ಳುಗಾಡಿಗಳು, ಮೇಲ್ಛಾವಣಿ ರಚನೆಗಳು, ಶೆಡ್‌ಗಳು ಹಾಗೂ ರ್ಯಾಂಪ್‌ಗಳನ್ನು ತೆರವುಗೊಳಿಸಲಾಯಿತು. ಕೆಲವು ನಗರ ನಿಗಮಗಳು ಸಾರ್ವಜನಿಕ ಪಾದಚಾರಿ ಮಾರ್ಗಗಳಲ್ಲಿ ಬಿಟ್ಟುಹೋಗಿದ್ದ ಅಥವಾ ಅಡ್ಡಿಯಾಗಿದ್ದ ದ್ವಿಚಕ್ರ ವಾಹನಗಳು ಹಾಗೂ ಕಾರುಗಳನ್ನು ಸಹ ತೆರವುಗೊಳಿಸಿವೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಜುಲೈ 1ರಂದು 76.55 ಕಿ.ಮೀ., ಜುಲೈ 2ರಂದು 64.55 ಕಿ.ಮೀ. ಹಾಗೂ ಜುಲೈ 3ರಂದು 61.60 ಕಿ.ಮೀ. ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ.
ನಗರ ನಿಗಮವಾರು ಅಂಕಿಅಂಶಗಳ ಪ್ರಕಾರ, ಬೆಂಗಳೂರು ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು 63.7 ಕಿ.ಮೀ. ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಲಾಗಿದ್ದು, ನಂತರದ ಸ್ಥಾನಗಳಲ್ಲಿ ಬೆಂಗಳೂರು ಉತ್ತರ (39.65 ಕಿ.ಮೀ.), ಬೆಂಗಳೂರು ಮಧ್ಯ (35.85 ಕಿ.ಮೀ.), ಬೆಂಗಳೂರು ದಕ್ಷಿಣ (32.9 ಕಿ.ಮೀ.) ಹಾಗೂ ಬೆಂಗಳೂರು ಪೂರ್ವ (30.6 ಕಿ.ಮೀ.) ವಲಯಗಳಿವೆ.
ಅಭಿಯಾನದ ಪ್ರಗತಿಯನ್ನು ಪರಿಶೀಲಿಸಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಪಾದಚಾರಿಗಳ ಓಡಾಟ ಹೆಚ್ಚಿರುವ ಬೆಂಗಳೂರಿನ ಒಟ್ಟು ರಸ್ತೆ ಜಾಲದ ಕೇವಲ 20 ಶೇಕಡಾ ಭಾಗದಲ್ಲಿ ಮಾತ್ರ ಈ ಕಾರ್ಯಾಚರಣೆ ನಡೆಸಲಾಗುವುದು ಎಂದರು. ಉಳಿದ ರಸ್ತೆಗಳಲ್ಲಿ ಕಾನೂನಿನ ಪ್ರಕಾರ ವಾಣಿಜ್ಯ ಚಟುವಟಿಕೆಗಳು ಹಾಗೂ ಬೀದಿಬದಿ ವ್ಯಾಪಾರ ಮುಂದುವರಿಯಬಹುದು ಎಂದು ಹೇಳಿದರು.
ಸರ್ಕಾರದ ಉದ್ದೇಶ ಜೀವನೋಪಾಯಕ್ಕೆ ಧಕ್ಕೆಯುಂಟುಮಾಡುವುದಲ್ಲ, ಬದಲಿಗೆ ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಅಡೆತಡೆಯಿಲ್ಲದ ಸಂಚಾರವನ್ನು ಖಚಿತಪಡಿಸುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜೀವನೋಪಾಯಕ್ಕೆ ತೊಂದರೆ ಉಂಟುಮಾಡುವುದು ನಮ್ಮ ಉದ್ದೇಶವಲ್ಲ. ಪ್ರತಿಯೊಬ್ಬ ನಾಗರಿಕರು ಸುರಕ್ಷಿತವಾಗಿ ನಡೆಯಲು ಸಾಧ್ಯವಾಗಬೇಕು ಎಂಬುದೇ ನಮ್ಮ ಗುರಿ. ಸಾರ್ವಜನಿಕ ಸುರಕ್ಷತೆ ಮತ್ತು ಸಾರ್ವಜನಿಕರ ಹಕ್ಕುಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಎಲ್ಲ ರಾಜಕೀಯ ಪಕ್ಷಗಳ ಶಾಸಕರು ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ ಸಚಿವರು, ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಅನುಗುಣವಾಗಿ ಈ ಕಾರ್ಯಾಚರಣೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಬೆಂಗಳೂರು ನಮ್ಮೆಲ್ಲರಿಗೂ ಬದುಕಲು ಹಾಗೂ ಬೆಳೆಯಲು ಅವಕಾಶ ನೀಡಿದೆ. ಆದ್ದರಿಂದ ನಗರವನ್ನು ಉತ್ತಮಗೊಳಿಸುವುದು ಸರ್ಕಾರ, ಸಂಸ್ಥೆಗಳು ಮತ್ತು ಪ್ರತಿಯೊಬ್ಬ ನಾಗರಿಕರ ಜಂಟಿ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಆದರೆ, ಈ ಕಾರ್ಯಾಚರಣೆಗೆ ಕೆಲವು ನಾಗರಿಕರು ಹಾಗೂ ಬೀದಿಬದಿ ವ್ಯಾಪಾರಿಗಳ ಸಂಘದಿಂದ ವಿರೋಧ ವ್ಯಕ್ತವಾಗಿದೆ. ವಿಶೇಷವಾಗಿ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲ ಬೀದಿಬದಿ ವ್ಯಾಪಾರಿಗಳ ವಸ್ತುಗಳನ್ನು ಕಾರ್ಯಾಚರಣೆಯ ವೇಳೆ ವಶಪಡಿಸಿಕೊಳ್ಳಲಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.