ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಜುಲೈ 1ರಿಂದ ಆರಂಭವಾಗಿದ್ದು, ಬಾಡಿಗೆದಾರರು ಉಚಿತ ವಿದ್ಯುತ್ ಸೌಲಭ್ಯ ಕೈತಪ್ಪುವ ಭೀತಿಯಲ್ಲಿದ್ದಾರೆ.
ಪರಿಶೀಲನೆ ವೇಳೆ ಅಧಿಕಾರಿಗಳು ಫಲಾನುಭವಿಗಳ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಬಾಡಿಗೆ ಒಪ್ಪಂದದ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ಅಗತ್ಯ ದಾಖಲೆಗಳನ್ನು ಸಲ್ಲಿಸಲು ವಿಫಲರಾದರೆ ಗೃಹ ಜ್ಯೋತಿ ಯೋಜನೆಯಡಿ ದೊರೆಯುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಈ ಕುರಿತು ಬೆಸ್ಕಾಂ ಪ್ರತಿಕ್ರಿಯಿಸಿದ್ದು, ಬಾಡಿಗೆದಾರರು ತಮ್ಮ ಆಧಾರ್ ವಿವರಗಳ ನವೀಕರಣ (ಅಪ್ಡೇಟ್) ಕುರಿತು ಯಾವುದೇ ಗೊಂದಲ ಅಥವಾ ಆತಂಕ ಪಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಮನೆ ಮನೆ ಸಮೀಕ್ಷೆ ನಡೆಸಲಿರುವ ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ, ಹಳೆಯ ಬಾಡಿಗೆದಾರರ ಆಧಾರ್ ವಿವರಗಳನ್ನು ತೆಗೆದುಹಾಕಿ ಪ್ರಸ್ತುತ ವಾಸವಿರುವ ಬಾಡಿಗೆದಾರರ ಆಧಾರ್ ಸಂಖ್ಯೆಯನ್ನು ಸ್ಥಳದಲ್ಲೇ ಅಪ್‌ಡೇಟ್ ಮಾಡಲಿದ್ದಾರೆ.
ಹಳೆಯ ದಾಖಲೆಗಳ ಕಾರಣದಿಂದಾಗಿ ಉಚಿತ ವಿದ್ಯುತ್ ಸೌಲಭ್ಯ ಸ್ಥಗಿತಗೊಳ್ಳಬಹುದು ಎಂಬ ಬಾಡಿಗೆದಾರರ ಆತಂಕಕ್ಕೆ ಬೆಸ್ಕಾಂ ತೆರೆ ಎಳೆದಿದ್ದು, ಯೋಜನೆ ಎಂದಿನಂತೆ ಮುಂದುವರಿಯಲಿದೆ ಎಂದು ತಿಳಿಸಿದೆ.
ವಿವರಗಳನ್ನು ಬದಲಾಯಿಸಲು ಬಾಡಿಗೆದಾರರು ಯಾವುದೇ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಬೆಸ್ಕಾಂ ಸಿಬ್ಬಂದಿಯೇ ನೇರವಾಗಿ ಮನೆ ಬಾಗಿಲಿಗೆ ಬಂದು ಸಮೀಕ್ಷೆ ನಡೆಸಲಿದ್ದು, ಆ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮತ್ತು ಬಾಡಿಗೆ/ಲೀಸ್ ಕರಾರು ಪತ್ರದ ವಿವರಗಳನ್ನು ಒದಗಿಸಿದರೆ ಸಾಕು. ಇದು ಕೇವಲ ಫಲಾನುಭವಿಗಳ ದಾಖಲೆಗಳನ್ನು ದೃಢೀಕರಿಸುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಹೀಗಾಗಿ ಗ್ರಾಹಕರು ಯಾವುದೇ ಆತಂಕವಿಲ್ಲದೆ ಸಮೀಕ್ಷಾ ತಂಡಕ್ಕೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು ಹಾಗೂ ಮನೆ ಮಾಲೀಕರು ಸಹ ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಬೆಸ್ಕಾಂ ಕೋರಿದೆ.
ಸಹಾಯವಾಣಿ: ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ಗ್ರಾಹಕರು ತಮ್ಮ ಹತ್ತಿರದ ಬೆಸ್ಕಾಂ ಉಪ-ವಿಭಾಗದ ಕಚೇರಿಯನ್ನು ಸಂಪರ್ಕಿಸಬಹುದು. ಇಲ್ಲವೇ ಪ್ರತಿದಿನ ಬೆಳಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಲಭ್ಯವಿರುವ ಕೆಳಗಿನ ಸಹಾಯವಾಣಿಗಳನ್ನು ಬಳಸಿಕೊಳ್ಳಬಹುದು:
ಬೆಸ್ಕಾಂ ಸಹಾಯವಾಣಿ ಸಂಖ್ಯೆ: 1912, ವಿಶೇಷ ವಾಟ್ಸಾಪ್ (WhatsApp) ಸಂಖ್ಯೆಗಳು: 9480816111, 9480816112, 9480816113, 9480816114