ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯಲ್ಲಿ "ಭಾರಿ ಅಕ್ರಮಗಳು" ನಡೆದಿವೆ ಎಂದು ಆರೋಪಿಸಿ ಎನ್‌ಡಿಎ ನಾಯಕರ ನಿಯೋಗ ಸೋಮವಾರ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬುಕುಮಾರ್ ಅವರಿಗೆ ಔಪಚಾರಿಕ ದೂರು ಸಲ್ಲಿಸಿದ್ದು, ಮನೆ-ಮನೆಗೆ ಮರು ತೆರಳಿ ಪರಿಶೀಲನೆಯನ್ನು ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿದೆ.
ಈ "ಅಕ್ರಮಗಳಿಗೆ" ಕಾರಣರಾದ ಎಲ್ಲಾ ಅಧಿಕಾರಿಗಳು ಮತ್ತು ರಾಜಕೀಯ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆಯೂ ನಾಯಕರು ಒತ್ತಾಯಿಸಿದ್ದಾರೆ. ಕೇಂದ್ರ ಸಚಿವ ಮತ್ತು ಜೆಡಿ(ಎಸ್) ನಾಯಕ ಎಚ್ ಡಿ ಕುಮಾರಸ್ವಾಮಿ, ಬಿಜೆಪಿಯ ಪ್ರಹ್ಲಾದ್ ಜೋಶಿ ಮತ್ತು ಶೋಭಾ ಕರಂದ್ಲಾಜೆ, ಕರ್ನಾಟಕ ವಿಧಾನಸಭೆ ಮತ್ತು ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ಅವರನ್ನು ಒಳಗೊಂಡ ನಿಯೋಗವು ಸಿಇಒ ಅನ್ಬು ಕುಮಾರ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಲು ಎನ್ ಡಿ ಎ ನಾಯಕರು, SIR ನಡೆಸಬೇಕಾದ ಅಧಿಕಾರಿಗಳು ಅನುಮೋದಿತ ಪ್ರಕ್ರಿಯೆಯ ಬಗ್ಗೆ ಶೂನ್ಯ ಗೌರವ ತೋರಿಸುತ್ತಿದ್ದಾರೆ, ಇದರಿಂದಾಗಿ ಪ್ರಜಾಪ್ರಭುತ್ವದ ಚೈತನ್ಯವನ್ನೇ ಹಾಳು ಮಾಡುತ್ತಿದ್ದಾರೆ" ಎಂದು ನಾಯಕರು ಪತ್ರದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಚುನಾವಣಾ ಅಧಿಕಾರಿ (DEO/DC) ನಿರ್ದೇಶನದ ಮೇರೆಗೆ ಬೂತ್ ಮಟ್ಟದ ಅಧಿಕಾರಿಗಳು (BLOಗಳು) SIR ಮಾರ್ಗಸೂಚಿಗಳ ಪ್ರಕಾರ ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಬೇಕು ಮತ್ತು ಪ್ರತಿ ಮನೆಯ ಸದಸ್ಯರ ಗುರುತನ್ನು ವೈಯಕ್ತಿಕವಾಗಿ ಪರಿಶೀಲಿಸಬೇಕು ಎಂದಿದ್ದಾರೆ.
ಮನೆ ಮನೆಗೆ ತೆರಳಿ ಮಾಡಬೇಕಾದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಹಲವೆಡೆ ಸಾಮೂಹಿಕವಾಗಿ, ಮಸೀದಿಗಳು ಮತ್ತು ಚೌಲ್ಟ್ರಿಗಳಂತಹ ಸ್ಥಳಗಳಲ್ಲಿ ನಡೆಸಲಾಗುತ್ತಿದೆ. ಅನರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ.
ರಾಮನಗರ, ಯಶವಂತಪುರ, ಜಯನಗರ, ಇಂಡಿ, ಕುಣಿಗಲ್, ಪಾವಗಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಈ ಲೋಪಗಳು ಕಂಡುಬಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಕ್ಕಾಗಿಯೇ ವಾಟ್ಸಾಪ್ ಗುಂಪುಗಳನ್ನು ಸಹ ರಚಿಸಲಾಗಿದೆ ಈ ಸಂಬಂಧ ರಾಜ್ಯದ ಹಲವಾರು ಇತರ ಭಾಗಗಳಿಂದ ಹಲವಾರು ದೂರುಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇಂತಹ ಕ್ರಮವು ಸ್ಥಾಪಿತ ಎಸ್‌ಐಆರ್ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಮತ್ತು ಚುನಾವಣಾ ಪ್ರಕ್ರಿಯೆಯ ತಟಸ್ಥತೆ ಮತ್ತು ಜಾತ್ಯತೀತ ಸ್ವಭಾವದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ.
ಮತದಾರರ ಪಟ್ಟಿಯ ಸಮಗ್ರತೆಯನ್ನು ಬಲಪಡಿಸಲು ಎಸ್‌ಐಆರ್ ಅನ್ನು ನಡೆಸಲಾಗುತ್ತದೆ, ಆದರೆ ಬಿಎಲ್‌ಒಗಳು ಈ ಪ್ರಕ್ರಿಯೆಯನ್ನು ನಡೆಸುವ ವಿಧಾನವು ಪರಿಷ್ಕರಣೆಯ ಉದ್ದೇಶವನ್ನೇ ಬುಡ ಮೇಲು ಮಾಡುತ್ತಿದೆ" ಎಂದು ಅವರು ಹೇಳಿದರು. ಇದರಿಂದ ಸಮರ್ಥನೀಯವಲ್ಲದ ಮತ್ತು ವಿಶ್ವಾಸಾರ್ಹವಲ್ಲದ" ಮತದಾರರ ಪಟ್ಟಿ ಸೃಷ್ಟಿಯಾಗುತ್ತದೆ ಎಂದು ನಿಯೋಗ ಆರೋಪಿಸಿದೆ. ಜೂನ್ 30 ರಂದು ಪ್ರಾರಂಭವಾದ ಕರ್ನಾಟಕದಲ್ಲಿ ಎಸ್‌ಐಆರ್‌ನ ಮನೆ-ಮನೆ ಗಣತಿ ಹಂತವು ಜುಲೈ 29 ರವರೆಗೆ ಮುಂದುವರಿಯುತ್ತದೆ.