ನಟ, ರಾಜಕಾರಣಿ ಉಪೇಂದ್ರ 
ರಾಜ್ಯ

ಧರ್ಮ ಮನೆಯಲ್ಲಿರಲಿ-ಅಭಿವೃದ್ಧಿ ಚುನಾವಣೆಗೆ ಬರಲಿ: ನನ್ನನ್ನು ನೋಡಿ ಮತ ಹಾಕಬೇಡಿ-ಸಿದ್ಧಾಂತಕ್ಕೆ ಮತ ನೀಡಿ; ನಟ, ರಾಜಕಾರಣಿ ಉಪೇಂದ್ರ (Interview)

Manjula VN

ಜನರು ವ್ಯಕ್ತಿಯನ್ನು ನೋಡಿ ಅಲ್ಲ, ಸಿದ್ಧಾಂತವನ್ನು ನೋಡಿ ಮತ ಹಾಕಬೇಕು. ರಾಜಕೀಯವು ಹಣದ ಆಟವಾಗಬಾರದು; ಜನಸೇವೆಯ ವ್ಯವಸ್ಥೆಯಾಗಬೇಕು" ಎಂದು ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಜಾಕೀಯ ಸಿದ್ಧಾಂತ, ಇಂದಿನ ರಾಜಕೀಯ ವ್ಯವಸ್ಥೆ, ಭ್ರಷ್ಟಾಚಾರ, ಮುಖ್ಯಮಂತ್ರಿ ಹುದ್ದೆ ಕುರಿತು ತಮ್ಮ ನಿಲುವು, ಧಾರ್ಮಿಕ ರಾಜಕೀಯ, ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ, ಕನ್ನಡ ಚಿತ್ರರಂಗ ಹಾಗೂ ತಮ್ಮ ಮುಂದಿನ ಸಿನಿಮಾ ಯೋಜನೆಗಳ ಕುರಿತು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಿರ್ದೇಶಕ, ನಟ, ರಾಜಕಾರಣಿ... ಈ ಮೂರು ಪಾತ್ರಗಳಲ್ಲಿ ಯಾವುದು ಹೆಚ್ಚು ಇಷ್ಟ?

ಇದುವರೆಗೆ ನಿರ್ದೇಶಕನಾಗಿ ಕೆಲಸ ಮಾಡುವುದನ್ನೇ ಹೆಚ್ಚು ಇಷ್ಟಪಟ್ಟಿದ್ದೆ. ಆದರೆ, ಈಗ ಸಮಾಜದಲ್ಲಿ ಬದಲಾವಣೆ ತರುವ ವ್ಯಕ್ತಿಯಾಗಿ ಕೆಲಸ ಮಾಡುವುದೇ ಹೆಚ್ಚು ಸಂತೋಷ ನೀಡುತ್ತಿದೆ. ಸಿನಿಮಾ ಕೂಡ ಸಮಾಜದಲ್ಲಿ ಬದಲಾವಣೆ ತರಬಲ್ಲ ಮಾಧ್ಯಮ. ನಾನು ನನ್ನ ಸಿನಿಮಾಗಳ ಮೂಲಕ ಅದನ್ನೇ ಮಾಡಲು ಪ್ರಯತ್ನಿಸಿದ್ದೆ. ಈಗ ಅದೇ ಕೆಲಸವನ್ನು ರಾಜಕೀಯದ ಮೂಲಕ ಮಾಡಲು ಹೊರಟಿದ್ದೇನೆ. ಅದಕ್ಕಾಗಿ ಎಂಟು ವರ್ಷಗಳ ಹಿಂದೆ ಯಾವುದೇ ಹಣದ ಪ್ರಭಾವವಿಲ್ಲದ 'ಉತ್ತಮ ಪ್ರಜಾಕೀಯ ಪಕ್ಷ'ವನ್ನು ಆರಂಭಿಸಿದ್ದೇನೆ.

ಉತ್ತಮ ಪ್ರಜಾಕೀಯ ಪಕ್ಷದ ಮೂಲ ಸಿದ್ಧಾಂತವೇನು?

ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸತನ ಬಂದಿದೆ. ತಂತ್ರಜ್ಞಾನದಿಂದ ಜನರನ್ನು ಸುಲಭವಾಗಿ ಸಂಪರ್ಕಿಸಬಹುದು. ಹಾಗಿದ್ದಾಗ ರಾಜಕೀಯ ಮಾತ್ರ ಹಳೆಯ ಮಾದರಿಯಲ್ಲೇ ಯಾಕಿರಬೇಕು? ಈಗ ರಾಜಕೀಯ ಹೂಡಿಕೆ ಮತ್ತು ಲಾಭದ ವ್ಯವಹಾರವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದವರು ಮಾತ್ರ ಗೆಲ್ಲುವ ಪರಿಸ್ಥಿತಿ ಇದೆ. ಇದನ್ನು ಬದಲಾಯಿಸಬೇಕು. ರಾಜಕಾರಣಿಗಳು ಜನಸೇವಕರಾಗಬೇಕು. ಅವರಿಗೆ ಜವಾಬ್ದಾರಿ ಇರಬೇಕು. ಜನರಿಗೆ ಅವರನ್ನು ಪ್ರಶ್ನಿಸುವ ಹಾಗೂ ಅಗತ್ಯವಿದ್ದರೆ ಹಿಂದಕ್ಕೆ ಕರೆಸಿಕೊಳ್ಳುವ ಹಕ್ಕೂ ಇರಬೇಕು. ಜನರು ರಾಜಕಾರಣಿಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ. ಜನರನ್ನು ತಲುಪಲು ನಾನು ನನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿದ್ದೇನೆ.

ಎಂಟು ವರ್ಷಗಳಲ್ಲಿ ಪಕ್ಷದಲ್ಲಿ ಏನು ಬದಲಾವಣೆಯಾಗಿದೆ?

ಆರಂಭದಲ್ಲಿ ಹಲವರು ನನ್ನನ್ನು ಹುಚ್ಚ ಎಂದು ಹೇಳಿದರು. ಹಣ ಖರ್ಚು ಮಾಡದೆ ರಾಜಕೀಯ ಸಾಧ್ಯವಿಲ್ಲ ಎಂದರು. ಆದರೆ, ಈಗ ಜನರು ಪ್ರಜಾಕೀಯದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ನಮ್ಮ ಬಳಿ ದೊಡ್ಡ ಮಟ್ಟದ ಹಣವಿಲ್ಲ, ಕಾರ್ಯಕರ್ತರ ದೊಡ್ಡ ಪಡೆ ಇಲ್ಲ. ಆದರೂ ಜನರ ಬೆಂಬಲ ಹೆಚ್ಚುತ್ತಿದೆ. ಇತರರನ್ನು ದೂರುವುದಕ್ಕಿಂತ ಪರಿಹಾರ ಹುಡುಕುವುದೇ ನಮ್ಮ ಉದ್ದೇಶ.

ಜನರು ಪ್ರಜಾಕೀಯವನ್ನು ಅರ್ಥ ಮಾಡಿಕೊಂಡಿದ್ದಾರೆಯೇ?

ಪ್ರಜಾಕೀಯವನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ನಮ್ಮನ್ನೇ ನಾವು ಅರ್ಥ ಮಾಡಿಕೊಳ್ಳುವುದು. ನಾವು ಜಾತಿ, ಧರ್ಮ, ಹಣ, ವ್ಯಕ್ತಿಗಳನ್ನು ನೋಡಿ ಮತ ಹಾಕುತ್ತೇವೆ. ಆದರೆ, ನಿಜವಾದ ಸಮಸ್ಯೆಗಳನ್ನು ಮರೆತುಬಿಡುತ್ತೇವೆ. ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ಮುಖ್ಯವಾಗಬೇಕು. ಪಕ್ಷಗಳ ಪ್ರಣಾಳಿಕೆಗಳು ಕಾನೂನುಬದ್ಧವಾಗಿರಬೇಕು.

ನೀವು ಕರ್ನಾಟಕದ ಮುಖ್ಯಮಂತ್ರಿ ಆಗುವ ಕನಸು ಇಟ್ಟುಕೊಂಡಿದ್ದೀರಾ?

ನಾನು ಈ ಪಕ್ಷವನ್ನು ನಾಯಕನಾಗಲು ಆರಂಭಿಸಿಲ್ಲ. ಒಬ್ಬ ಕಾರ್ಯಕರ್ತನಾಗಿ ಆರಂಭಿಸಿದ್ದೇನೆ. ಜನರು ನನ್ನ ಹೆಸರನ್ನು ನೋಡಿ ಮತ ಹಾಕಬೇಕೆಂದು ನಾನು ಬಯಸುವುದಿಲ್ಲ. ವ್ಯಕ್ತಿಗಲ್ಲ, ಪಕ್ಷಕ್ಕಲ್ಲ, ಸಿದ್ಧಾಂತಕ್ಕೆ ಮತ ಹಾಕಬೇಕು. "ನಾವು ಯಾರಿಗೆ ಮತ ಹಾಕುತ್ತಿದ್ದೇವೆ?" ಎನ್ನುವುದಕ್ಕಿಂತ "ಯಾವ ವಿಚಾರಕ್ಕೆ ಮತ ಹಾಕುತ್ತಿದ್ದೇವೆ?" ಎನ್ನುವುದು ಮುಖ್ಯ.

ತಮಿಳುನಾಡಿನಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಇದೆ. ಜನರು ಬದಲಾವಣೆಯನ್ನು ನಿರೀಕ್ಷಿಸುತ್ತಾರೆ, ಜನರು ನಿಮ್ಮಿಂದ ಯಾವ ರೀತಿಯ ಬದಲಾವಣೆ ನಿರೀಕ್ಷಿಸಬಹುದು?

ಎಲ್ಲರೂ ಬದಲಾವಣೆ ಬೇಕು ಎನ್ನುತ್ತಾರೆ. ಆದರೆ, ಯಾವ ಬದಲಾವಣೆ ಬೇಕು ಎಂಬುದು ಸ್ಪಷ್ಟವಾಗಿಲ್ಲ. ಕೇವಲ ಹೊಸ ಪಕ್ಷ ಅಥವಾ ಹೊಸ ಮುಖ್ಯಮಂತ್ರಿ ಬಂದರೆ ಬದಲಾವಣೆ ಆಗುವುದಿಲ್ಲ. ವ್ಯವಸ್ಥೆ ಬದಲಾಗಬೇಕು.

ಕಾಕ್‌ರೋಚ್ ಜನತಾ ಪಕ್ಷ (CJP) ಪ್ರತಿಭಟನೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಅಂತಹ ಪ್ರತಿಭಟನೆಗಳು ಭಾವೋದ್ವೇಗದಿಂದ ನಡೆಯುತ್ತವೆ. ನಾನು ಜನರಲ್ಲಿ ಆಲೋಚನೆ ಮೂಡಿಸಲು ಪ್ರಯತ್ನಿಸುತ್ತಿದ್ದೇನೆ. ಕೇವಲ ಕೋಪ ಮತ್ತು ಭಾವನೆಗಳು ಶಾಶ್ವತ ಬದಲಾವಣೆ ತರಲಾರವು.

ಜನರು ಪ್ರಜಾಕೀಯ ಸೇರಲು ನೀವು ಹೇಗೆ ಮನವೊಲಿಸುತ್ತಿದ್ದೀರಿ? ನಿಮ್ಮ ದಿ ರಿಯಲ್ ಪ್ರಜಾಕೀಯ ಅಪ್ಲಿಕೇಶನ್ ಬಗ್ಗೆಯೂ ನಮಗೆ ತಿಳಿಸಿ?

ಪಕ್ಷದ ಕಾರ್ಯವಿಧಾನಕ್ಕೆ ಸ್ಪಷ್ಟ SOP ರೂಪಿಸಿದ್ದೇವೆ. ಆ್ಯಪ್ ಮೂಲಕ ಸಾಮಾನ್ಯ ನಾಗರಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸ್ಥಳೀಯ ಪ್ರತಿನಿಧಿಗಳಿಗೆ ತಿಳಿಸಬಹುದು. ಕರೆ, ವಾಟ್ಸಾಪ್, ವಿಡಿಯೊ ಕಾಲ್ ಅಥವಾ ನೇರ ಭೇಟಿ ಮೂಲಕ ಸಂಪರ್ಕಿಸಬಹುದು. ಪ್ರತಿನಿಧಿಗಳ ಕಾರ್ಯಕ್ಷಮತೆಯನ್ನು ಜನರೇ ಮೌಲ್ಯಮಾಪನ ಮಾಡಬಹುದು.

ಸಾಮಾಜಿಕ ಜಾಲತಾಣಗಳ ಮೂಲಕ ಮಾತ್ರ ಜನರನ್ನು ತಲುಪುವುದು ಸಾಧ್ಯವೇ?

ಖಂಡಿತ ಸಾಧ್ಯ. ಲಕ್ಷಾಂತರ ಜನರು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ವಿಚಾರಗಳನ್ನು ನೋಡುತ್ತಿದ್ದಾರೆ. ಹಳ್ಳಿಗಳಲ್ಲಿಯೂ ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಾಗಿದೆ.

ನೀವು ಮತ್ತು ನಿಮ್ಮ ಪಕ್ಷದ ಅಭ್ಯರ್ಥಿಗಳು ಮುಂಬರುವ GBA ಚುನಾವಣೆಗಳಲ್ಲಿ ಸ್ಪರ್ಧಿಸುತ್ತೀರಾ?

ಖಂಡಿತ. ಆ್ಯಪ್ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸಿರುವ ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಒಳ್ಳೆಯದಿದ್ದರೆ ಮುಂದುವರಿಯಲಿ. ನನ್ನ ಗ್ಯಾರಂಟಿ ಎಂದರೆ ಸಂಪೂರ್ಣ ಪಾರದರ್ಶಕತೆ. ಜನರ ಬೇಡಿಕೆಗಳೇ ನಮ್ಮ ಪ್ರಣಾಳಿಕೆ. ಪ್ರಜಾಪ್ರಭುತ್ವ ಎಂದರೆ ಕೇವಲ ಮತ ಹಾಕುವುದು ಅಲ್ಲ, ನಿರಂತರವಾಗಿ ಭಾಗವಹಿಸುವ ವ್ಯವಸ್ಥೆ.

ಪ್ರಜಾಕೀಯದ ಮೊದಲ ಯಶಸ್ಸು ಯಾವಾಗ ಸಿಗುತ್ತದೆ ಎಂದು ಭಾವಿಸುತ್ತೀರಿ?

ಅದು ಈಗಾಗಲೇ ಸಿಕ್ಕಿದೆ. ನಾಲ್ಕು ವರ್ಷಗಳ ಹಿಂದೆ ಆರೇಹಳ್ಳಿ ಮತ್ತು ಸೊಕ್ಕೆ ಗ್ರಾಮ ಪಂಚಾಯಿತಿಗಳಲ್ಲಿ ನಾವು ಗೆದ್ದಿದ್ದೇವೆ.

ಪ್ರಜಾಕೀಯ ಒಂದು ಸಿದ್ಧಾಂತವೇ ಅಥವಾ ರಾಜಕೀಯ ಪಕ್ಷವೇ?

ಇದು ರಾಜಕೀಯ ಪಕ್ಷ. ಆದರೆ ಹಣ, ಪ್ರಚಾರ ಮತ್ತು ದೊಡ್ಡ ಕಟೌಟ್‌ಗಳ ರಾಜಕೀಯದಲ್ಲಿ ನಮ್ಮಂತಹ ಪಕ್ಷಗಳನ್ನು ಜನರು ಸುಲಭವಾಗಿ ಗಮನಿಸುವುದಿಲ್ಲ. ಆದರೂ ಮತಪತ್ರದಲ್ಲಿ ನಾವು ಇದ್ದೇವೆ.

ನೀವು ಅರಾಜಕತಾವಾದಿಯೇ? ನಿಮಗೆ ನಾಯಕರು ಅಗತ್ಯವಿಲ್ಲ ಎಂದು ನೀವು ಹೇಳುತ್ತೀರಿ..?

ಸಂವಿಧಾನದಲ್ಲಿ 'ನಾಯಕ' ಎಂಬ ಪದ ಇಲ್ಲ. 'ಜನಸೇವಕರು' ಮಾತ್ರ ಇದ್ದಾರೆ. ಅವರನ್ನು ನಾವು ನಾಯಕರನ್ನಾಗಿ ಮಾಡಿದ್ದೇವೆ. ಜನಸೇವಕರು ಜನರ ಆಶಯದಂತೆ ಕೆಲಸ ಮಾಡಬೇಕು. ನಾನು ಸಂವಿಧಾನ ಬದಲಾಯಿಸಲು ಬಯಸುವುದಿಲ್ಲ, ವ್ಯವಸ್ಥೆ ಬದಲಾಯಿಸಲು ಬಯಸುತ್ತೇನೆ.

ಯಾವ ನಾಯಕ ನಿಮ್ಮನ್ನು ಪ್ರೇರೇಪಿಸಿದ್ದಾರೆ?

ಅನೇಕ ನಾಯಕರು ಪ್ರೇರೇಪಿಸಿದ್ದಾರೆ. ಆದರೆ ವರ್ಷಗಳು ಕಳೆದರೂ ಸಮಸ್ಯೆಗಳು ಹಾಗೆಯೇ ಉಳಿದಿವೆ. ಹಣವಲ್ಲ, ಜ್ಞಾನ ಮತ್ತು ಶಿಕ್ಷಣವೇ ನನ್ನನ್ನು ಇಲ್ಲಿವರೆಗೆ ತಂದಿವೆ. ಜನರ ಆಲೋಚನೆ ಬದಲಾದರೆ ರಾಜಕೀಯವೂ ಬದಲಾಗುತ್ತದೆ.

ನಿಮ್ಮ ಸಿದ್ಧಾಂತ ಚುನಾವಣೆ ಗೆಲ್ಲಲು ಸಹಾಯ ಮಾಡುತ್ತದೆಯೇ?

ಅದು ಮತದಾರರ ಕೈಯಲ್ಲಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದವರು ಆ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಾರೆ. ಅಲ್ಲಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ.

ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ?

ನಾನು ಆಯ್ಕೆ ಮಾಡುವುದಿಲ್ಲ. ಜನರೇ ಅಭ್ಯರ್ಥಿಗಳೊಂದಿಗೆ ಮಾತನಾಡಿ, ಅವರ ಕೆಲಸವನ್ನು ಮೌಲ್ಯಮಾಪನ ಮಾಡುತ್ತಾರೆ. ಹೆಚ್ಚಿನ ಜನರ ವಿಶ್ವಾಸ ಪಡೆದವರೇ ಅಭ್ಯರ್ಥಿಯಾಗುತ್ತಾರೆ.

ಧಾರ್ಮಿಕ ವಿಚಾರಗಳ ಬಗ್ಗೆ ನಿಮ್ಮ ನಿಲುವು ಏನು?

ಧರ್ಮ ಮನೆಯಲ್ಲಿರಬೇಕು. ಚುನಾವಣೆಯ ಸಮಯದಲ್ಲಿ ಮಾತ್ರ ಧಾರ್ಮಿಕ ವಿಚಾರಗಳು ಬರುತ್ತವೆ. ಮತದಾರರು ಆಸ್ಪತ್ರೆ, ಶಾಲೆ, ರಸ್ತೆ ಕೇಳುವುದು ಸರಿಯಾದ ಬೇಡಿಕೆ. ದೇವಸ್ಥಾನ ಕಟ್ಟಬೇಕೆಂದರೆ ಅದನ್ನು ಜನರೇ ಮಾಡಿಕೊಳ್ಳಬಹುದು.

ಹೊಸ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ನಿಮ್ಮ ನಿರೀಕ್ಷೆ ಏನು?

ಅವರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ. ಚಿತ್ರರಂಗಕ್ಕೆ ಅವರಿಂದ ವಿಶೇಷ ನಿರೀಕ್ಷೆ ಇಲ್ಲ. ನಾವು ಉತ್ತಮ ಸಿನಿಮಾಗಳನ್ನು ಮಾಡಬೇಕು.

ಕನ್ನಡ ಚಿತ್ರರಂಗದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ನಿಮ್ಮ ಅಭಿಪ್ರಾಯ?

ಬದಲಾವಣೆ ನಿರಂತರ. ಹೊಸ ಆಲೋಚನೆಗಳು ಬರುತ್ತಿವೆ. 'ಕೆಜಿಎಫ್', 'ಕಾಂತಾರ'ದಂತಹ ಸಿನಿಮಾಗಳು ಹೊಸ ದಾರಿ ತೋರಿಸಿವೆ. ಪ್ರತಿಭಾವಂತರಿಗೆ ಅವಕಾಶ ಯಾವಾಗಲೂ ಇರುತ್ತದೆ.

ನಿಮ್ಮ ಮುಂದಿನ ಸಿನಿಮಾ ಯಾವುದು?

ಕನ್ನಡದಲ್ಲಿ 'ನೆಕ್ಸ್ಟ್ ಲೆವೆಲ್' ಸಿನಿಮಾ ಮಾಡುತ್ತಿದ್ದೇನೆ. ತಮಿಳಿನ ಒಂದು ಸಿನಿಮಾದಲ್ಲೂ ನಟಿಸುತ್ತಿದ್ದೇನೆ. ನನ್ನ ನಿರ್ದೇಶನದಲ್ಲಿ ಮತ್ತೊಂದು ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ.

OTT ಯುಗದಲ್ಲಿ ಚಿತ್ರಮಂದಿರಗಳ ಭವಿಷ್ಯ ಹೇಗಿದೆ?

ಮಾಧ್ಯಮಗಳ ರೂಪ ಬದಲಾಗುತ್ತಿದೆ. OTT, ಶಾರ್ಟ್ ಫಿಲ್ಮ್, ಮೈಕ್ರೋ ಡ್ರಾಮಾ, ಯೂಟ್ಯೂಬ್ ಎಲ್ಲವೂ ಹೊಸ ಅವಕಾಶಗಳು. ಚಿತ್ರಮಂದಿರ ಮತ್ತು OTT ಅನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ.

ಕನ್ನಡ ಸಿನಿಮಾಗಳಿಗೆ OTTಯಲ್ಲಿ ಸಾಕಷ್ಟು ಅವಕಾಶ ಸಿಗುತ್ತಿಲ್ಲ ಎಂಬ ಆರೋಪ ಇದೆ...

ಜನರು ಕನ್ನಡ ಸಿನಿಮಾಗಳನ್ನು ಹೆಚ್ಚು ನೋಡಿದರೆ ಅವಕಾಶವೂ ಹೆಚ್ಚುತ್ತದೆ. ಕೆಲವೊಮ್ಮೆ ಕೊರಿಯನ್, ಕೆಲವೊಮ್ಮೆ ತಮಿಳು ಅಥವಾ ಹಿಂದಿ ಸಿನಿಮಾಗಳು ಜನಪ್ರಿಯವಾಗುತ್ತವೆ. ಇದು ಕಾಲಾನುಸಾರ ಬದಲಾಗುವ ಪ್ರಕ್ರಿಯೆ.

ದೊಡ್ಡ ಬಜೆಟ್ ಸಿನಿಮಾಗಳು ತಯಾರಾಗಲು ಮೂರರಿಂದ ನಾಲ್ಕು ವರ್ಷಗಳು ಬೇಕಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಹೇಗೆ ಉಳಿಯಲಿದೆ?

ಹಿಂದೆ ಕಥೆ ಸಿಗುವುದು ಸುಲಭವಾಗಿತ್ತು, ಆದರೆ, ಸಿನಿಮಾ ನಿರ್ಮಾಣ ಮಾಡುವುದು ಕಷ್ಟವಾಗುತ್ತಿತ್ತು. ಒಂದು ಕಾಲದಲ್ಲಿ ಕೇವಲ 30 ದಿನಗಳಲ್ಲಿ ಸಿನಿಮಾ ಮುಗಿಸಿ ಬಿಡುಗಡೆ ಮಾಡಲಾಗುತ್ತಿತ್ತು. ಆಗ ಸರಳ ನಿರೂಪಣೆಯ ಸಿನಿಮಾಗಳನ್ನೂ ಪ್ರೇಕ್ಷಕರು ಸ್ವೀಕರಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಒಳ್ಳೆಯ ಕಥೆ ಹುಡುಕುವುದಕ್ಕೇ ಆರು ತಿಂಗಳಿಂದ ಒಂದು ವರ್ಷ ಬೇಕಾಗುತ್ತದೆ. ಅದಕ್ಕೆ ಗ್ರಾಫಿಕ್ಸ್, ತಾಂತ್ರಿಕ ಕೆಲಸಗಳು ಸೇರಿದಂತೆ ಹಲವು ಹಂತಗಳು ಸೇರಿರುವುದರಿಂದ ದೊಡ್ಡ ಸಿನಿಮಾಗಳು ಪೂರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.

ಸಿನಿಮಾಗಳಲ್ಲಿನ ಹಿಂಸಾತ್ಮಕ ದೃಶ್ಯಗಳಿಗೆ ಕಟ್ಟುನಿಟ್ಟಿನ ಸೆನ್ಸಾರ್ ಇಲ್ಲದಿರುವುದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆಯೇ?

ಈಗ ಮಕ್ಕಳ ಕೈಯಲ್ಲೇ ಮೊಬೈಲ್ ಇದೆ. ಅವರಿಗೆ ಯಾವುದೇ ರೀತಿಯ ವಿಷಯವನ್ನು ಸುಲಭವಾಗಿ ನೋಡಲು ಸಾಧ್ಯವಾಗುತ್ತಿದೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಜನರನ್ನು ತಲುಪುವ ಮಾಧ್ಯಮವಾಗಿರುವುದರಿಂದ ಕೆಲವು ಮಟ್ಟಿನ ಸೆನ್ಸಾರ್ ಅಗತ್ಯವಿರಬಹುದು. ಆದರೆ, ಅತಿಯಾದ ನಿರ್ಬಂಧ ಹೇರಿದರೆ ಪ್ರೇಕ್ಷಕರು ಸಿನಿಮಾವನ್ನು ಆಸ್ವಾದಿಸಲು ಸಾಧ್ಯವಾಗುವುದಿಲ್ಲ. ಹಿಂದೆ ಸಣ್ಣ ಮಟ್ಟಿನ ಹಿಂಸೆಯೂ ದೊಡ್ಡ ವಿಷಯವೆನಿಸುತ್ತಿತ್ತು. ಆದರೆ, ಈಗ ಅದು ಸಾಮಾನ್ಯವಾಗಿ ಕಾಣುವ ಮಟ್ಟಿಗೆ ಸಮಾಜ ಮತ್ತು ಪ್ರೇಕ್ಷಕರ ಮನೋಭಾವ ಬದಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭೂಕುಸಿತಕ್ಕೆ ಮುಂಬೈ-ಪುಣೆ ರೈಲು ಸಂಚಾರ ಸ್ಥಗಿತ; ಎಕ್ಸ್‌ಪ್ರೆಸ್‌ವೇ ಬಂದ್, ಸಾವಿರಾರು ಪ್ರಯಾಣಿಕರು ಪರದಾಟ..!

ಕುಮ್ಕಿ ಆನೆ ಸಾವು: ಸಮವಸ್ತ್ರವಿಲ್ಲದ ಯೋಧೆ, ಅರಣ್ಯ ಇಲಾಖೆ ಸಿಬ್ಬಂದಿಗಳ ಕಣ್ಣೀರಿನ ವಿದಾಯ

ಇದೆಂಥಾ ಲವ್! ಹಿಂದು ಮಹಿಳೆಯರು ಬೇಕು, ಆದ್ರೆ ಮತಾಂತರ ಯಾಕೆ ಆಗಿಲ್ಲ, ನಟ ಆಮೀರ್ ಖಾನ್ ವಿರುದ್ಧ ಮುಸ್ಲಿಂ ಲೀಡರ್ ಕಿಡಿ, Video

FIFA World Cup 2026: ಸೋಲಿನ ಆಘಾತದೊಂದಿಗೆ ಬ್ರೆಜಿಲ್ ನಿರ್ಗಮನ, ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ನೆಯ್ಮಾರ್ ಕಣ್ಣೀರ ವಿದಾಯ! Video

ಪೆಸಿಫಿಕ್ ಮಹಾಸಾಗರದಲ್ಲಿ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ನಡೆಸಿದ ಚೀನಾ; ಜಪಾನ್-ನ್ಯೂಜಿಲೆಂಡ್‌ ತೀವ್ರ ಕಳವಳ..!