ಬೆಂಗಳೂರು: ನಗರದ ಹೊರವಲಯದ ಕಾಡಯರಪ್ಪನಹಳ್ಳಿ ಬಳಿಯ ಖಾಸಗಿ ವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮಗನ ಸಾವಿಗೆ ಶಾಲೆಯ ದೈಹಿಕ ಶಿಕ್ಷಕರ ಹಲ್ಲೆ ಹಾಗೂ ಒತ್ತಡವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಮೃತನನ್ನು ಕಾಡಯರಪ್ಪನಹಳ್ಳಿ ಖಾಸಗಿ ವಸತಿ ಶಾಲೆಯ ವಿದ್ಯಾರ್ಥಿ ಗುರುಕಿರಣ್ ಎಂದು ಗುರುತಿಸಲಾಗಿದೆ. ಸ್ಟರ್ಲಿಂಗ್ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗುರುಕಿರಣ್ ಗೆ ಆರೋಗ್ಯ ಸರಿಯಿಲ್ಲ ಎಂದು ಇಂದು ಬೆಳಗ್ಗೆ ಪೋಷಕರಿಗೆ ಕರೆ ಬಂದಿದೆ. ಆದರೆ, ದುರಾದೃಷ್ಟವಶಾತ್ ಪೋಷಕರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ.
ಪೋಷಕರು ನೀಡಿದ ದೂರಿನ ಆಧಾರದ ಮೇಲೆ ದೈಹಿಕ ಶಿಕ್ಷಕನ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಗುರುಕಿರಣ್ ಬೆಳಿಗ್ಗೆ 5.15 ರ ಸುಮಾರಿಗೆ ಎಚ್ಚರಗೊಂಡು ಬೆಳಿಗ್ಗೆ 5.30 ರ ಸುಮಾರಿಗೆ ನಿಯಮಿತ ವ್ಯಾಯಾಮಕ್ಕಾಗಿ ಆಟದ ಮೈದಾನಕ್ಕೆ ಹೋಗಿದ್ದು, ಎರಡು ಸುತ್ತು ಓಡಿ ಬಂದ ಕೆಲವೇ ಕ್ಷಣಗಳಲ್ಲಿ ಗುರುಕಿರಣ್ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುಕಿರಣ್ ಕುಸಿದು ಬೀಳುವ ಮುನ್ನ ಶೌಚಾಲಯಕ್ಕೆ ಹೋಗಿ ತಡವಾಗಿ ಬಂದಿದ್ದಕ್ಕಾಗಿ ದೈಹಿಕ ಶಿಕ್ಷಕ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಸಹಪಾಠಿಯೊಬ್ಬ ಹೇಳಿಕೊಂಡಿದ್ದಾನೆ. ಸಣ್ಣಪುಟ್ಟ ವಿಷಯಗಳಿಗೂ ಶಿಕ್ಷಕ ಕೋಲಿನಿಂದ ಹೊಡೆಯುತ್ತಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಘಟನೆಯ ನಂತರ, ಕೋಪಗೊಂಡ ಪೋಷಕರು ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದು, ಆತನನ್ನು ವಶಕ್ಕೆ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನಾಕಾರರು ಪೊಲೀಸ್ ವಾಹನವನ್ನು ತಡೆದು ಬಾಲಕನಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ತನಿಖೆಯ ಭಾಗವಾಗಿ ವಿಚಾರಣೆಗಾಗಿ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.